ಗುಜರಾತ್: ಅರಬ್ಬೀ ಸಮುದ್ರದ ತೀರ ಪ್ರದೇಶಗಳಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಬಿಪರ್ಜಾಯ್ ಚಂಡಮಾರುತ (Cyclone Biparjoy) ಗುರುವಾರ ಮಧ್ಯಾಹ್ನ ಗುಜರಾತ್ ತೀರಕ್ಕೆ (Gujarat Coast) ಅಪ್ಪಳಿಸುವ ಸಾಧ್ಯತೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಸೂಚನೆ ಹಿನ್ನಲೆಯಲ್ಲಿ19 ಎನ್ಡಿಆರ್ಎಫ್ ತಂಡಗಳನ್ನು ಸಿದ್ದವಾಗಿಡಲಾಗಿದೆ. ಪರಿಸ್ಥಿತಿ ಕೈಮೀರಿದರೆ ಸೇನೆ, ನೌಕಾ ಪಡೆಗೆ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.
ಗುಜರಾತ್ ಸರ್ಕಾರವು ಮುಂಜಾಗ್ರತೆಯಾಗಿ ಕರಾವಳಿ ಕಛ್, ಜಾಮ್ನಗರ, ದೇವಭೂಮಿ ದ್ವಾರಕಾ ಮತ್ತು ಜುನಾಗಢ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ. ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿವೆ.
ಈಗಾಗಲೇ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅಪಾಯಗಳನ್ನು ತಡೆಯುವಂತೆ ಸೂಚನೆ ನೀಡಿದ್ದು ಸ್ಥಳೀಯ ಆಡಳಿತಗಳು ತೀರ ಪ್ರದೇಶಗಳಿಗೆ ಜನರ ಪ್ರವೇಶ ನಿಷೇಧಿಸಿವೆ. ಬಿಪರ್ಜಾಯ್ ತೀವ್ರತೆ ಏನು, ಇದು ಮಾಡಬಹುದಾದ ಹಾನಿಗಳೇನು ಎನ್ನುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಅಧ್ಯಯನಗಳನ್ನು ನಡೆಸುತ್ತಿದ್ದು ಸರ್ಕಾರಕ್ಕೆ ನಿರಂತರ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದೆ.