ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲ್ ಅವಿವಾ ಜೂನ್ 16 ರಂದು ಮಂಡ್ಯದ ಜನತೆಗೆ ಅದ್ದೂರಿ ಬೀಗರೂಟ ಏರ್ಪಡಿಸಿದ್ದಾರೆ.
ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಇದೀಗ ಅಭಿಷೇಕ್ ಹಾಗೂ ಅವಿವಾ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, ಅಲ್ಲಿಯೇ ಬೀಗರೂಟ ನಡೆಯಲಿದೆ.
ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಟೆಂಟ್ ಹಾಕಲಾಗುತ್ತಿದ್ದು ಖುದ್ದು ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀಗರೂಟದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು ಭರ್ಜರಿ ಬಾಡೂಟದ ವ್ಯವಸ್ಥೆ ಇರಲಿದೆ. ಬೀಗರೂಟವನ್ನು ಪಕ್ಕಾ ಮಂಡ್ಯ ಶೈಲಿಯಲ್ಲಿ ಆಯೋಜಿಸುತ್ತಿದ್ದು, ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ ಸೇರಿದಂತೆ ಇನ್ನೂ ಸಾಕಷ್ಟು ವೆರೈಟಿ ಮೆನುನಲ್ಲಿ ಇರಲಿದೆ.
ಬೀಗರ ಊಟದ ಸಿದ್ಧತೆಯನ್ನು ಅಂಬರೀಶ್ ಕುಟುಂಬದ ಆಪ್ತ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಪರಿಶೀಲನೆ ನಡೆಸಿದರು. ಈ ವೇಳೆ ಎಲ್ಲರಿಗೂ ಸಲಹೆ ಸೂಚನೆಯನ್ನು ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ರಾಕ್ಲೈನ್ ವೆಂಕಟೇಶ್ ಅಂಬರೀಶ್ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವನ್ನು ಬೀಗರ ಊಟದ ಮೆನುವಾಗಿ ಮಾಡಲಾಗುತ್ತದೆ. ಎಷ್ಟೇ ಸಾವಿರ ಜನರು ಬಂದರೂ ಊಟದ ವ್ಯವಸ್ಥೆ ಇದ್ದು, ಬೆಳಿಗ್ಗೆ 11ಗಂಟೆಯಿಂದಲೇ ಊಟದ ಆರಂಭವಾಗಲಿದೆ.
ಸಿನಿಮಾ ಹಾಗೂ ರಾಜಕೀಯದಲ್ಲಿ ಅಂಬಿ ಕುಟುಂಬ ಪರ ನಿಂತ ಎಲ್ಲರಿಗೂ ಊಟ ಹಾಕಿಸುವುದು ಕುಟುಂಬಸ್ಥರ ಆಸೆ ಇದೆ, ಅದರಂತೆ ಅಭಿಷೇಕ್ ಬೀಗರ ಊಟ ಮಂಡ್ಯದಲ್ಲೇ ಮಾಡಲಾಗ್ತಿದೆ. ಮಂಡ್ಯ ಜಿಲ್ಲೆಯ ಬಾಣಸಿಗರಿಂದಲೇ ಬಾಡೂಟವನ್ನು ತಯಾರು ಮಾಡಿಸಲಾಗುತ್ತದೆ. ಅಂಬರೀಶ್ ಅವರಿಗೆ ಪ್ರಿಯವಾದ ಕೈಮಾ, ಬೋಟಿ ಗೊಜ್ಜು, ಮಟನ್ ಸೇರಿದಂತೆ ಮಂಡ್ಯ ಶೈಲಿಯಲ್ಲೇ ಅಡುಗೆ ಇರಲಿದೆ. ವಧು ವರರಿಗೆ ಕೇಕ್, ಹಾರ – ಬೊಕ್ಕೆ ತರದೆ ಜನರು ಬಂದು ಆಶೀರ್ವಾದ ಮಾಡಿದರೆ ಸಾಕು ಎಂದು ಅಭಿಷೇಕ್ ಮನವಿ ಮಾಡಿದ್ದಾರೆ ಎಂದು ರಾಕ್ಲೈನ್ ತಿಳಿಸಿದ್ದಾರೆ.