ಮುಂಬೈ: ಮೊಬೈಲಿನಲ್ಲಿ ಕ್ರಿಕೆಟ್ ವೀಕ್ಷಿಸುವ ಬಳಕೆದಾರರಿಗೆ ಡಿಸ್ನಿ ಹಾಟ್ಸ್ಟಾರ್ (Disney Hotstar) ಸಿಹಿ ಸುದ್ದಿ ಕೊಟ್ಟಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ (ICC Cricket World Cup) ಮೊಬೈಲ್ ಆ್ಯಪ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
2023ರಲ್ಲಿ ನಡೆದ 16ನೇ ಐಪಿಎಲ್ ಆವೃತ್ತಿಯಲ್ಲಿ ಜಿಯೋಸಿನಿಮಾ (JioCinema) ಆ್ಯಪ್ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಸಕ್ಸಸ್ ಕಂಡಿತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನ 3.2 ಕೋಟಿ ಜನ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿತು. ಹಾಗಾಗಿ ಪ್ರತಿಸ್ಪರ್ಧಿ ಡಿಸ್ನಿ ಹಾಟ್ಸ್ಟಾರ್ 2023ರಲ್ಲಿ ನಡೆಯಲಿರುವ ಏಕದಿನ ಏಷ್ಯಾಕಪ್ ಹಾಗೂ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದೆ
ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ಸೆಪ್ಟಂಬರ್ 2 ರಿಂದ ಸೆಪ್ಟಂಬರ್ 17ರ ವರೆಗೆ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಏಕದಿನ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಟೂರ್ನಿಗಳನ್ನ ಹಾಟ್ಸ್ಟಾರ್ ಮೊಬೈಲ್ ಆ್ಯಪ್ ಬಳಕೆದಾರರು ಚಂದಾದಾರರಾಗದೆಯೂ ಉಚಿತವಾಗಿ ವೀಕ್ಷಿಸಬಹುದಾಗಿದೆ.
2023ರ ಐಪಿಎಲ್ ಟೂರ್ನಿ ವೇಳೆ ಜಿಯೋಸಿನಿಮಾ ಮೊದಲ 5 ವಾರಗಳಲ್ಲೇ ದಾಖಲೆಯ 13 ಕೋಟಿ ಡಿಜಿಟಲ್ ವೀಕ್ಷಣೆ ಕಂಡಿತ್ತು. ಪ್ರತಿ ವೀಕ್ಷಕರು ಪ್ರತಿ ಪಂದ್ಯವನ್ನು ಕನಿಷ್ಠ 1 ಗಂಟೆ ವೀಕ್ಷಣೆ ಮಾಡಿದ್ದರು. 2023ರ ಐಪಿಎಲ್ ಹಕ್ಕು ಕಳೆದುಕೊಂಡ ನಂತರ ಹಾಟ್ಸ್ಟಾರ್ ಆ್ಯಪ್ ತನ್ನ 50 ಲಕ್ಷ ಮೂಲ ಬಳಕೆದಾರರನ್ನ ಕಳೆದುಕೊಂಡಿದೆ ಎಂದು ಸಿಎಲ್ಎಸ್ಎ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಡಿಸ್ನಿ ಹಾಟ್ಸ್ಟಾರ್ ಸಹ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ ಮೊಬೈಲ್ ಆ್ಯಪ್ ಬಳಕೆದಾರಿಗೆ ಉಚಿತ ಸ್ಟ್ರೀಮಿಂಗ್ ನೀಡಲು ನಿರ್ಧರಿಸಿದೆ.