ಬೆಂಗಳೂರು: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಎದ್ದಿದೆ. ಈ ಹಿಂದೆ ಅನೇಕ ಬಾರಿ ದಲಿತ ಸಿಎಂ ಕೂಗು ಎದ್ದಿದ್ದು ಪರಮೇಶ್ವರ್ ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಹೇಳಿಕೊಂಡು ಬಂದಿದ್ದು ಈಗ ಅದೇ ರೀತಿ ಮತ್ತೆ ಪರಮೇಶ್ವರ್ ಅವರು ಪ್ರಶ್ನೆ ಮಾಡುತ್ತಿದ್ದಾರೆ.
ನಾನು ಯಾಕೆ ಸಿಎಂ (Chief Minister) ಆಗಬಾರದು? ಮುನಿಯಪ್ಪ ಯಾಕಾಗಬಾರದು? ಮಹಾದೇವಪ್ಪ ಯಾಕೆ ಆಗಬಾರದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರಶ್ನಿಸಿದ್ದಾರೆ.
ದಲಿತಪರ ಸಂಘಟನೆಗಳು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಸರ್ಕಾರದ ದಲಿತ ಸಮುದಾಯದ ಸಚಿವರುಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಪರಮೇಶ್ವರ್ ಮಾತನಾಡಿದರು.
ನಮ್ಮಲ್ಲಿ ಕೀಳರಿಮೆ ಇರಬಾರದು. ಅದಕ್ಕೆ ನಾನು ಯಾವಾಗಲೂ ನಾನು ಸಿಎಂ ಆಗಬೇಕು ಅಂತ ಹೇಳುತ್ತೇನೆ. ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ಅದು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ನಾವು ಏನು ಸಾಧನೆ ಮಾಡುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಇರಬೇಕು ಎಂದರು.
ಕಾಂಗ್ರೆಸ್ಗೆ (Congress) 2018 ರಲ್ಲಿ ಸೋಲಾಯಿತು. ಯಾವ ಸಮುದಾಯವನ್ನು ಕಡೆಗಣಿಸಿದರೋ ಅದರಿಂದ ಪಾಠ ಕಲಿಯಬೇಕಾಯ್ತು ಎಂದು ಪರೋಕ್ಷವಾಗಿ ದಲಿತ ಸಿಎಂ ಮಾಡದ ಕಾರಣ ಕಾಂಗ್ರೆಸ್ಗೆ ಸೋಲಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.