ಬೆಂಗಳೂರು:- ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಸಂಸದ ತೇಜಸ್ವಿ ಸೂರ್ಯ ಬುಧವಾರ ಭೇಟಿ ಮಾಡಿದ್ದಾರೆ.
ಸೂರ್ಯ ಅವರ ಈ ಭೇಟಿಯು ಮಹಾ ಜನ ಸಂಪರ್ಕ ಅಭಿಯಾನದ ಭಾಗವಾಗಿದ್ದು, ಇದರಲ್ಲಿ ಬಿಜೆಪಿಯ ಪ್ರತಿಯೊಬ್ಬ ಸಂಸದರು ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚಿಸಬೇಕಿದೆ. ಅದರಂತೆ ತೇಜಸ್ವಿ ಸೂರ್ಯ ದೇವೇಗೌಡರ ಜೊತೆ ಮಾತುಕತೆ ನಡೆಸಿ ಕೆಲಕಾಲ ಚರ್ಚಿಸಿದ್ದಾರೆ.
ಬಸವನಗುಡಿಯ ಎನ್.ಆರ್. ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ತಂದಿರುವ ಸುಧಾರಣೆಗಳ ಕುರಿತು ಸಂಸದ ಸೂರ್ಯ ಮಾಜಿ ಪ್ರಧಾನಿಗೆ ವಿವರಿಸಿದರು. ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು, ವಿಶೇಷವಾಗಿ ಕನಕಪುರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸ್ವನಿಧಿಯ ಮೂಲಕ ತಂದ ಮಧ್ಯಸ್ಥಿಕೆಗಳ ಕುರಿತು ಅವರು ಮಾತನಾಡಿದರು.
ಇದರೊಂದಿಗೆ, ನಗರದ ಅಭಿವೃದ್ಧಿಯ ವಿವಿಧ ಅಂಶಗಳನ್ನು ಚರ್ಚಿಸಿದರು. ನಗರಕ್ಕೆ ಕೇಂದ್ರದ ಕೊಡುಗೆ, ವಿಶೇಷವಾಗಿ ಉಪನಗರ ರೈಲ್ವೆ ಯೋಜನೆ, ನಮ್ಮ ಮೆಟ್ರೋ ನಿರ್ಮಾಣ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ಹೆಚ್.ಡಿ.ದೇವೇಗೌಡರ ಜೊತೆ ಸೂರ್ಯ ವಿವರಿಸಿದರು.