ಪಾಟ್ನಾ: 14 ವರ್ಷದ ಬಾಲಕನನ್ನು ಕೊಂದು ತಿಂದ ಮೊಸಳೆ (Crocodile) ಯನ್ನೇ ಜನ ದೊಣ್ಣೆ, ರಾಡ್ನಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನನ್ನು ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾದ 5ನೇ ತರಗತಿ ವಿದ್ಯಾರ್ಥಿ.
ನಡೆದಿದ್ದೇನು..?: 14 ವರ್ಷದ ಬಾಲಕ ಹೊಸ ಸೈಕಲ್ (Motorcycle) ಖರೀದಿಸಿದ್ದನು. ಇದಕ್ಕೆ ಪೂಜೆ ಮಾಡಿಸುವ ಸಲುವಾಗಿ ತೊಳೆಯಲೆಂದು ಗಂಗಾ ನದಿಗೆ ಇಳಿದಿದ್ದಾನೆ. ಇನ್ನೊಂದೆಡೆ ಬಾಲಕನ ಕುಟುಂಬಸ್ಥರು ಕೂಡ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಈ ವೇಳೆ ಕುಟುಂಬಸ್ಥರು ನೋಡ ನೋಡುತ್ತಿದ್ದಂತೆಯೇ ಮೊಸಳೆಯೊಂದು ಬಂದು ಬಾಲಕನ ಮೇಲೆ ದಾಳಿ ಮಾಡಿದೆ. ಅಲ್ಲದೆ ನೀರಿನೊಳಗೆ ಎಳೆದುಕೊಂಡು ಹೋಗಿ ಆತನನ್ನು ತಿಂದು ಹಾಕಿದೆ.
ಘಟನೆ ನಡೆದು ಗಂಟೆಯ ಬಳಿಕ ಅಂಕಿತ್ ಮೃತದೇಹವನ್ನು ಗಂಗಾ ನದಿ (Ganga River) ಯಿಂದ ಹೊರಗೆ ತೆಗೆಯುವಲ್ಲಿ ಕುಟುಂಬ ಯಶಸ್ವಿಯಾಯಿತು. ಅಷ್ಟೊತ್ತಿಗಾಗಲೇ ಸುತ್ತಮುತ್ತಲಿನ ಜನ ಜಮಾಯಿಸಿದರು. ಬಳಿಕ ಮೊಸಳೆಯನ್ನು ನೀರಿನಿಂದ ಹೊರಗೆಳೆದು ದೊಣ್ಣೆ ಹಾಗೂ ಕಬ್ಬಿಣದ ರಾಡ್ಗಳಿಂದ ಹೊಡೆಯಲು ಆರಂಭಿಸಿದರು. ರಾಡ್ ಏಟಿಗೆ ಮೊಸಳೆ ಸತ್ತು ಹೋಗಿದೆ. ಇದರ ಸಂಪೂರ್ಣ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಸಂಬಂಧ ಅಂಕಿತ್ ತಾತ ಸಕಲದೀಪ್ ದಾಸ್ ಪ್ರತಿಕ್ರಿಯಿಸಿ, ನಾವು ಬಾಲಕನಿಗಾಗಿ ಹೊಸ ಸೈಕಲ್ ಖರೀದಿಸಿದ್ದೆವು. ಹೀಗಾಗಿ ಅದಕ್ಕೆ ಪೂಜೆ ಮಾಡಿಸುವ ಮೊದಲು ತೊಳೆಯಲೆಂದು ಗಂಗಾ ನದಿಗೆ ಬಂದಿದ್ದೆವು. ಈ ವೇಳೆ ಮೊಸಳೆ ದಾಳಿ ಮಾಡಿ ಆತನನ್ನು ಕೊಂದಿದೆ. ಸಿಟ್ಟಿನಿಂದ ನಾವು ಕೂಡ ಮೊಸಳೆಯನ್ನು ಹಿಡಿದು ಕೊಂದೆವು ಎಂದು ತಿಳಿಸಿದ್ದಾರೆ.