ಧರ್ಮಶಾಲಾ: ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಹತ್ಯೆಗೈದು ಮೃತದೇಹವನ್ನು 7 ತುಂಡುಗಳಾಗಿ (Body Chopped) ಕತ್ತರಿಸಿದ ಭೀಕರ ಘಟನೆ ಹಿಮಾಚಲ ಪ್ರದೇಶದ (Himachal Pradesh) ಚಂಬಾ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಮನೋಹರ್ಲಾಲ್ ಮುಸ್ಲಿಂ ಹುಡುಗಿಯನ್ನು (Muslim Girl) ಪ್ರೀತಿಸುತ್ತಿದ್ದ. ಈ ವಿಚಾರಕ್ಕೆ ಸಿಟ್ಟಾದ ಯುವತಿಯ ಮನೆಯ ಮೂವರು ಮನೋಹರ್ನನ್ನು ಥಳಿಸಿ, ಬಳಿಕ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಮೃತದೇಹವನ್ನು 7 ತುಂಡುಗಳಾಗಿ ಕತ್ತರಿಸಿ ಚರಂಡಿಗೆ ಎಸೆದಿದ್ದಾರೆ. ಜೂನ್ 6 ರಂದು ಮನೋಹರ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಜೂನ್ 8 ರಂದು ನಾಪತ್ತೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ಮನೋಹರ್ ಮೃತದೇಹದ ಭಾಗಗಳು ಜೂ.9ರಂದು ಚರಂಡಿಯಲ್ಲಿ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಬರ್ಬರ ಹತ್ಯೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿದಂತೆ ಬಾಲಕಿ ಸಹೋದರ ಶಬ್ಬಿರ್ ಸೇರಿದಂತೆ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಹುಡುಗಿಯನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.