ಆಂಸ್ಟರ್ಡ್ಯಾಮ್ : ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ಪ್ರಮಾಣ ತಗ್ಗಿಸಲು ನೆದರ್ಲೆಂಡ್ ಸರ್ಕಾರ ಹೊಸ ಯೋಜನೆಯೊಂದನ್ನು ಕೈಕೊಂಡಿದೆ. ಈ ಮೂಲಕ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಣೆ ಒದಗಿಸಲು ಎಲ್ಲರಿಗೂ ಉಚಿತವಾಗಿ ಸನ್ ಕ್ರೀಮ್ ವಿತರಿಸಲು ಮುಂದಾಗಿದೆ.
ಅದಕ್ಕಾಗಿ ದೇಶಾದ್ಯಂತ ಶಾಲೆಗಳು, ವಿಶ್ವವಿದ್ಯಾಲಯಗಳು, ಉತ್ಸವಗಳು, ಉದ್ಯಾನವನಗಳು, ಕ್ರೀಡಾ ಸ್ಥಳಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸನ್ ಕ್ರೀಮ್ ವಿತರಕಗಳನ್ನು ಇರಿಸಲಾಗುತ್ತಿದೆ. ವಾರಾಂತ್ಯದಲ್ಲಿ ಬ್ರೆಡಾದಲ್ಲಿ ನಡೆದ ಉತ್ಸವದಲ್ಲಿ ಸನ್ ಕ್ರೀಮ್ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಆಸ್ಟ್ರೇಲಿಯಾದ ಯಶಸ್ವಿ `ಸ್ಲಿಪ್, ಸ್ಲಾಪ್, ಸ್ಲ್ಯಾಪ್’ ಅಭಿಯಾನದಿಂದ ಸ್ಫೂರ್ತಿ ಪಡೆದ ನಂತರ ತನ್ನ ದೇಶದ ಪ್ರಜೆಗಳೂ ಬಿಸಿಲಿನ ವಾತಾವರಣದಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಉಡುಪು ಧರಿಸುವುದು, ಸನ್ಸ್ಕ್ರೀನ್ ಹಾಗೂ ಟೋಪಿ ಧರಿಸುವಂತೆ ಸೂಚಿಸಿದೆ. ಇಲ್ಲಿನ ಎಲ್ಲ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು 120 ಪ್ರಾಥಮಿಕ ಶಾಲೆಗಳಿಗೆ ಸನ್ ಕ್ರೀಮ್ ವಿತರಿಸಲು ಹಣ ನೀಡಲು ಯೋಜಿಸಿದೆ.
ಇಲ್ಲಿನ ವೈದ್ಯಕೀಯ ತಜ್ಞರೂ ಇತ್ತೀಚಿನ ವರ್ಷಗಳಲ್ಲಿ ಜನ ಚರ್ಮದ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಸನ್ ಕ್ರೀಮ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದ್ದಾರೆ.