ಬೆಂಗಳೂರು:– ಅಧಿಕಾರಕ್ಕೆ ಬಂದ ಕೂಡಲೇ ಡಿಕೆ ಸಹೋದರರಿಂದ ದ್ವೇಷ ರಾಜಕಾರಣ ಸಾಧಿಸಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್, ವಿಶೇಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ನನ್ನ ವಿರುದ್ಧ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ಕಾಂಗ್ರೆಸ್ ನಾಯಕರ ಸೇಡಿನ ರಾಜಕಾರಣವಲ್ಲದೆ ಬೇರೇನೂ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಬಿಬಿಎಂಪಿ ಅಧಿಕಾರಿಗಳ ಅಮಾನತು ಹಾಗೂ ನನ್ನ ಹೆಸರನ್ನು ವಿವಾದಕ್ಕೆ ಎಳೆದು ತರುತ್ತಿರುವುದು ಆರಂಭವಷ್ಟೇ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದ್ವೇಷದ ರಾಜಕೀಯ ನಡೆಯಲಿದೆ ಎಂದಿದ್ದಾರೆ.
ರಾಜ್ಯಪಾಲರಿಗೆ ದೂರು ಸಲ್ಲಿಸುವ ಅಥವಾ ಬಿಜೆಪಿ ಹೈಕಮಾಂಡ್ಗೆ ವಿಷಯ ಪ್ರಸ್ತಾಪಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತೇನೆ ಎಂದು ಹೇಳಿದರು.