ಬೆಂಗಳೂರು ;- ಪ್ರಯಾಣಿಕನ ಸೋಗಿನಲ್ಲಿ ಓಲಾ, ಊಬರ್ ಬುಕ್ ಮಾಡಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿನಯ್ ಬಂಧಿತ ಆರೋಪಿಯಾಗಿದ್ದು, ಉತ್ತರ ಕರ್ನಾಟಕದ ಭಾಗದ ಓಲಾ, ಊಬರ್ ಚಾಲಕರೇ ಈತನ ಟಾರ್ಗೆಟ್ ಎಂದು ಹೇಳಲಾಗಿದೆ. ಪೊಲೀಸರಿಗೆ ದೂರು ಕೊಡಲ್ಲ ಅಂತ ಓಲಾ ಚಾಲಕನನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಎಂಬುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಆರೋಪಿಯು, ಹೆಚ್ ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಈ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ. ಚಾಲಕನ ಕಡೆಯಿಂದ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಹಣ ಹಾಕಿಸುವಂತೆಯ ಹೆದರಿಸುತ್ತಿದ್ದ. ಆಸ್ಪತ್ರೆಗೆ ಸೇರಿದ್ದೀನಿ ನನಗೆ ಹಣದ ಅವಶ್ಯಕತೆಯಿದೆ ಎಂದು ಚಾಲಕರ ಕುಟುಂಬಸ್ಥರಿಗೆ ಕರೆ ಮಾಡಿಸುತ್ತಿದ್ದ ಎಂಬುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಇನ್ನೂ ಆರೋಪಿ ಬಂಧನದಿಂದ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.