ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ಮಾದರಿಯನ್ನೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅನುಸರಿಸಿದ್ದು, ಇನ್ನು ಮುಂದೆ ಸನ್ಮಾನದ ಸಂದರ್ಭದಲ್ಲಿ ಹಾರ, ತುರಾಯಿ, ಶಾಲುಗಳನ್ನು ಹಾಕಬೇಡಿ ಬದಲಿಗೆ ಪುಸ್ತಕ ನೀಡಿ ಎಂದು ಮನವಿ ಮಾಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರ ಸೂಚನೆಯ ಮೇರೆಗೆ, ಅವರ ಆಪ್ತಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸುತ್ತೋಲೆ ಹೊರಡಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜಿಲ್ಲೆಯ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ಅವರಿಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ ಹಾರ, ತುರಾಯಿ ಬದಲು ಪುಸ್ತಕ ಕೊಡುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಲ್ಲೇ ತಮಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹಾರ, ಶಾಲು ನೀಡದಂತೆ ಮತ್ತು ಕೊಡಲೇಬೇಕೆಂದರೆ ಪುಸ್ತಕಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು, ನಂತರ ಬೆಂಗಳೂರು ಟ್ರಾಫಿಕ್ ಗಮನದಲ್ಲಿಟ್ಟುಕೊಂಡು ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಕೂಡ ಬೇಡ ಎಂದು ಪೊಲೀಸ್ ಇಲಾಖೆಗೆ ಜಿ ಪರಮೇಶ್ವರ್ ತಿಳಿಸಿದ್ದರು.