ರಾಂಚಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಶನಿವಾರ ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ವಿಭಾಗದ ನ್ಯಾಯಾಧೀಶ ಡಿ.ಎನ್. ಶುಕ್ಲಾ ನಟಿ ಅಮೀಶಾ ಪಟೇಲ್ ಗೆ ಜಾಮೀನು ಮಂಜೂರು ಮಾಡಿದ್ದು, ಜೂನ್ 21ರಂದು ಮತ್ತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
2018ರಲ್ಲಿ ಜಾರ್ಖಂಡ್ ಮೂಲದ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ನಟಿ ಅಮೀಶಾ ಪಟೇಲ್ ವಿರುದ್ಧ ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಕೂಡ ನಟಿ ಕೋರ್ಟ್ಗೆ ಹಾಜರಾಗಿರಲಿಲ್ಲ. ಆ ಬಳಿಕ, ನ್ಯಾಯಾಲಯ ಅಮೀಶಾ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು ಎಂದು ದೂರುದಾರರ ಪರ ವಕೀಲ ವಿಜಯ ಲಕ್ಷ್ಮಿ ಶ್ರೀವಾಸ್ತವ ತಿಳಿಸಿದ್ದಾರೆ.
ಸಿನಿಮಾ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ‘ದೇಸಿ ಮ್ಯಾಜಿಕ್’ ಎಂಬ ಶೀರ್ಷಿಕೆಯ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಈ ಸಿನಿಮಾದಲ್ಲಿ ನಟಿಸಲು ನಟಿ ಅಮೀಶಾ ಪಟೇಲ್ ಗೆ 2.5 ಕೋಟಿ ರೂಪಾಯಿ ಹಣ ನೀಡಿದ್ದರು. ಅಮೀಶಾ ಪಟೇಲ್ ಅವರು ಚಿತ್ರದಲ್ಲಿ ನಟಿಸದ ಕಾರಣ ಹಣ ವಾಪಸ್ ಕೊಡುವಂತೆ ತಿಳಿಸಿದ್ದರು. ಅಮೀಶಾ ಅವರು 2.5 ಕೋಟಿ ಚೆಕ್ ಕಳುಹಿಸಿದ್ದರೂ ಅದು ಬೌನ್ಸ್ ಆಗಿತ್ತು. ಈ ಕುರಿತು ಇಬ್ಬರ ನಡುವೆ ಜಗಳ ನಡೆದು ಕೊನೆಗೆ ಅಜಯ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಅಮೀಶಾ ಪಟೇಲ್ಗೆ ಜಾಮೀನು ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಜೂನ್ 21 ರಂದು ನಡೆಯಲಿದೆ.