ಲಂಡನ್: 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ನವೀನ್ ಉಲ್ ಹಕ್ ನಡುವಿನ ಮಾತಿನ ಚಕಮಕಿ ಸಾಕಷ್ಟು ಸದ್ದು ಮಾಡಿತ್ತು. ಲಖನೌದ ಏಕಾನ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ನಡೆದ ಈ ಮಾತಿನ ಚಕಮಕಿಯ ಕುರಿತಂತೆ ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಇದೀಗ ಆಫ್ಘಾನಿಸ್ತಾನ ಮೂಲದ ವೇಗದ ಬೌಲರ್ ನವೀನ್ ಉಲ್ ಹಕ್, ಅಂದು ಈ ವಾಗ್ವಾದ ಹೇಗೆ ಶುರುವಾಯಿತು ಎನ್ನುವುದರ ಕುರಿತಂತೆ ಬಿಬಿಸಿ ವಾಹಿನಿಯ ಜತೆಗಿನ ಮಾತುಕತೆಯ ವೇಳೆ ವಿವರಿಸಿದ್ದಾರೆ.
“ಪಂದ್ಯ ಮುಗಿದ ಬಳಿಕ, ಹಸ್ತಲಾಘವನ ಮಾಡುವ ವೇಳೆ ಜಗಳ ಆರಂಭಿಸಿದ್ದು ಮೊದಲು ವಿರಾಟ್ ಕೊಹ್ಲಿಯೇ ಹೊರತು ನಾನಲ್ಲ. ದಂಡ ವಿಧಿಸಿದ್ದನ್ನೇ ನೀವು ಗಮನಿಸಿದರೆ, ನಿಮಗೆ ಅರ್ಥವಾಗುತ್ತದೆ, ಯಾರು ಮೊದಲು ಜಗಳ ಶುರುಮಾಡಿದ್ದೆಂದು ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ. ಆರ್ಸಿಬಿ ಹಾಗೂ ಲಖನೌ ನಡುವಿನ ಪಂದ್ಯ ಮುಕ್ತಾಯದ ಬಳಿಕ ಮೈದಾನದಲ್ಲಿ ಕ್ರೀಡಾಸ್ಪೂರ್ತಿ ಮರೆತು ವರ್ತಿಸಿದ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಸಂಪೂರ್ಣ ದಂಡವನ್ನು ವಿಧಿಸಲಾಗಿತ್ತು.
ಇನ್ನು ನವೀನ್ ಉಲ್ ಹಕ್ ಅವರಿಗೆ ಪಂದ್ಯದ ಸಂಭಾವನೆಯ ಅರ್ಧದಷ್ಟು ದಂಡದ ಶಿಕ್ಷೆ ವಿಧಿಸಲಾಗಿತ್ತು. ಇನ್ನು ಇದೇ ವೇಳೆ ನವೀನ್ ಉಲ್ ಹಕ್, “ನಾನು ಯಾರನ್ನೂ ಕೆಣಕಲು ಹೋಗುವುದಿಲ್ಲ, ಒಂದು ವೇಳೆ ಸ್ಲೆಡ್ಜಿಂಗ್ ಮಾಡಿದರೂ, ಅದು ಬೌಲಿಂಗ್ ಮಾಡುವಾಗ ಮಾತ್ರ. ಪಂದ್ಯ ಮುಗಿದ ಬಳಿಕ ನಾನು ಜಗಳ ಮಾಡಲ್ಲ. ಆದರೆ ಆರ್ಸಿಬಿ ಎದುರಿನ ಪಂದ್ಯದ ದಿನ ಮ್ಯಾಚ್ನಲ್ಲೂ ಕೂಡಾ ನಾನೂ ಯಾವುದೇ ಸ್ಲೆಡ್ಜಿಂಗ್ ಮಾಡಿರಲಿಲ್ಲ ಎಂದು ಬಿಬಿಸಿ ಪಾಸ್ಟೋಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.