ನವದೆಹಲಿ: ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ‘ಆದಿಪುರುಷ’ ಸಿನಿಮಾದ ಸಂಭಾಷಣೆಗಳು ಸಾಕಷ್ಟು ಟೀಕೆಗೆ ಗುರಿಯಾಗಿವೆ. ಸಿನಿಮಾದಲ್ಲಿ ಹಿಂದು ದೇವರನ್ನು ಅದರಲ್ಲೂ ಹನುಮಂತನನ್ನು ಅವಮಾನಿಸುವ ರೀತಿಯಲ್ಲಿ ಡೈಲಾಗ್ ಹೇಳಿಸಲಾಗಿದ್ದು, ಇದಕ್ಕೆ ಹಲವು ರಾಜಕಾರಣಿಗಳು, ನಟರು ಹಾಗೂ ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದೀಗ ಈ ಕುರಿತು ಗಾಯಕ ಸೋನು ನಿಗಮ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಗಾಯಕ ಸೋನು ನಿಗಂ, ‘ಈ ದೇಶಕ್ಕೆ ಅಪಾಯ ಇರುವುದು ಇಬ್ಬರಿಂದ ಮಾತ್ರ. ಒಬ್ಬರು ಜಾತಿವಾದಿಗಳು ಮತ್ತೊಬ್ಬರು ಜಮಾತ್ ಜನರು’. ದೇವರು ಅಂಥವರಿಗೆ ಬುದ್ಧಿ ಕೊಡಲಿ’ ಎಂದು ಬರೆದುಕೊಂಡಿದ್ದಾರೆ.
ಆಜಾದ್ ಸೇನಾ ಅಧ್ಯಕ್ಷ ಅಭಿಷೇಕ್ ಶುಕ್ಲಾ ಅವರು ಆದಿಪುರುಷ ಸಿನಿಮಾವನ್ನು ಉಲ್ಲೇಖಿಸಿ, ‘ನೀವೆಲ್ಲರೂ ಚಿತ್ರವನ್ನು ಸಾಧ್ಯವಾದಷ್ಟು ವಿರೋಧಿಸಿ ಅಥವಾ ಬೆಂಬಲಿಸಿ. ಅದು ನಿಮ್ಮ ಸ್ವಾತಂತ್ರ್ಯ. ಆದರೆ, ಬ್ರಾಹ್ಮಣ ಸಮಾಜದ ಉದಯೋನ್ಮುಖ ಮುಖವಾದ ಮನೋಜ್ ಮುಂತಾಶಿರ್ ಅವರನ್ನು ವಿರೋಧಿಸಿದಾಗ ಮಾತ್ರ ನಿಮಗೆ ತಕ್ಕ ಉತ್ತರ ಸಿಗುತ್ತದೆ’ ಎಂದು ಬರೆದುಕೊಂಡಿದ್ದರು. ಇವರ ಜಾತಿ ಆಧರಿತ ಟೀಕೆಯನ್ನು ಸೋನು ನಿಗಮ್ ವಿರೋಧಿಸಿದ್ದಾರೆ.
ಆದಿಪುರುಷ್ ಸಿನಿಮಾಗೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಶಿರ್ ಅವರ ಪೂರ್ಣ ಹೆಸರು ಮನೋಜ್ ಮುಂತಾಶಿರ್ ಶುಕ್ಲಾ. ಅವರು ಬ್ರಾಹ್ಮಣ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅವರು ಚಿತ್ರಕ್ಕೆ ಬರೆದ ಸಂಭಾಷಣೆಗಳು ತೀವ್ರ ವಿರೋಧಕ್ಕೆ ಕಾರಣವಾಗಿವೆ. ಕೆಲವರು ಈ ವಿವಾದವನ್ನು ಜಾತಿಗೆ ತಳುಕು ಹಾಕುತ್ತಿದ್ದಾರೆ. ಮನೋಜ್ ಬದಲಾಗಿ ಬ್ರಾಹ್ಮಣ ಸಮುದಾಯವನ್ನೇ ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದರ ಹಿನ್ನೆಲೆಯಲ್ಲಿ ಸೋನು ನಿಗಮ್ ಟ್ವೀಟ್ ಮೂಲಕ ತಮ್ಮ ಪ್ರತಿಭಟನೆಯನ್ನು ಸೂಚಿಸಿದ್ದಾರೆ.