ಹುಬ್ಬಳ್ಳಿ: ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ವಿತರಣೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ,
ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು, ಏಕೆಂದರೆ ನಾವು ಅಂದರೆ ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಾ ಇದೆ, ಮತ್ತೆ ಕೇಂದ್ರ ಸರ್ಕಾರವೇ ಕೊಡಬೇಕು ಅಂದ್ರೆ ಹೇಗೆ?, ಸುಖಾಸುಮ್ಮನೆ ಜನರನ್ನ ಅಡ್ಡದಾರಿಗೆ ಎಳೆಯಬೇಡಿ, ಇದೀಗ ಅಕ್ಕಿ ಬರಲ್ಲ, ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ನೀವು ಹೀಗೆ ಮಾಡುತ್ತಿದ್ದರೆ, ನೀವು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಸರಿದಂತೆ ಅರ್ಥ ಆಗುತ್ತದೆ ಎಂದರು. ರಾಜ್ಯ ಸರ್ಕಾರ ಇದೀಗ ಛತ್ತೀಸಗಡದಿಂದ ಅಕ್ಕಿ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಎಲ್ಲಿಂದಾದರೂ ಅಕ್ಕಿ ತರಿಸಲಿ, ನಮಗೆ ಬಡಜನರಿಗೆ ಒಳ್ಳೆದಾದ್ರೆ ಸಾಕು, ಎಲ್ಲಿಂದ ತಗೊಬೇಕು, ಹೇಗೆ ತಗೊಬೇಕು ಅನ್ನೋ ಪ್ರಶ್ನೆ ಈಗ ಬರಲ್ಲ. ಆದರೆ ಅಕ್ಕಿ ತರಿಸಬೇಕು,
ಅಲ್ಲದೇ ರಾಜ್ಯದ ರೈತರು ಅಕ್ಕಿ ಕೊಡಲು ಮುಂದೆ ಬಂದ್ರೆ, ಅದನ್ನು ಖರೀದಿ ಮಾಡಬೇಕು, ಇದು ಒಳ್ಳೆಯ ಮಾರ್ಗ ಸಹ ಆಗಿದೆ ಎಂದು ಸಲಹೆ ನೀಡಿದರು. ಬಿಜೆಪಿಯವರೇ ಅಕ್ಕಿ ಕೊಡಿಸಿ ಅನ್ನೋದು ಸರಿ ಅಲ್ಲ, ಇದು ಯಾವ ನ್ಯಾಯ ಎಂದು ವಾಗ್ದಾಳಿ ನಡೆಸಿದರು. ಅಕಸ್ಮಾತ್ ಕಾಂಗ್ರೆಸ್ನವರು ಜುಲೈ 1ರಂದು ಅಕ್ಕಿ ಕೊಡದೇ ಹೋದ್ರೆ ನಾವು ಪ್ರತಿಭಟನೆ ಮಾಡ್ತೀವಿ ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ಎಚ್ಚರಿಕೆ ನೀಡಿದರು.