ಶಿವಮೊಗ್ಗ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದರೂ ಖರೀದಿ ಮಾಡಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (B.S.Yediyurappa) ಕಾಂಗ್ರೆಸ್ (Congress) ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಅಕ್ಕಿ ವಿತರಣೆ ಗೊಂದಲ ವಿಚಾರವಾಗಿ ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಹೆಚ್ಚುವರಿಯಾಗಿ ಅಕ್ಕಿ ಕೊಡಲು ಕೇಂದ್ರ ಒಪ್ಪಿರಲಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅದರಂತೆ ಅಕ್ಕಿ ವಿತರಣೆ ಮಾಡಬೇಕು. 1 ಗ್ರಾಂ ಕಡಿಮೆಯಾದರೂ ಜನ ಅದನ್ನು ಒಪ್ಪುವುದಿಲ್ಲ. ಕೇಂದ್ರ ಸರ್ಕಾರವನ್ನು ಅನಗತ್ಯ ದೂಷಿಸುವುದು ಸರಿಯಲ್ಲ. ಯಾವುದೇ ಸಮಯದಲ್ಲೂ ಮೋದಿಯವರು ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಲ್ಲ. ಈಗ ಕೊಡುತ್ತಿರುವುದು ಕೂಡ ಕೇಂದ್ರ ಸರ್ಕಾರ, ಅದು ಉಚಿತವಾಗಿ ಎಂದರು. ಸಿದ್ದರಾಮಯ್ಯ, ಡಿಕೆಶಿ ವಿನಾಕಾರಣ ಗೊಂದಲ ಉಂಟು ಮಾಡುತ್ತಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸದನ ಆರಂಭವಾಗುವುದರ ಒಳಗೆ ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ. ಅದರಲ್ಲಿ ಏನೂ ವಿಶೇಷ ಇಲ್ಲ ಎಂದರು.