ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇದೀಗ ಗ್ರೌಂಡ್ ಹೊರಗೂ ದಾಖಲೆ ಮಾಡಿದ್ದಾರೆ. ಹೌದು. ಇನ್ಸ್ಟಾಗ್ರಾಮ್ನಲ್ಲಿ 25.2 ಕೋಟಿ ಅಭಿಮಾನಿಗಳನ್ನು ಸಂಪಾದಿಸುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಕ್ರಿಕೆಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈಗ ಅವರ ಆಸ್ತಿಯ ಮೌಲ್ಯ 1 ಸಾವಿರ ಕೋಟಿ ರೂ.ಗೂ ಹೆಚ್ಚಾಗಿದೆ. ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ಸ್ಟಾಕ್ ಗ್ರೋ ಪ್ರಕಾರ, ಕೊಹ್ಲಿಯ ಆಸ್ತಿ ಮೌಲ್ಯ (Net Worth) 1,050 ಕೋಟಿ ರೂ. ಎಂದು ಅಂದಾಜಿಸಿದೆ.
34 ವರ್ಷದ ಕೊಹ್ಲಿ 2023ರ ವಾರ್ಷಿಕ ಒಪ್ಪಂದದ ಪ್ರಕಾರ `A+’ ಶ್ರೇಣಿಯಲ್ಲಿ ಆಯ್ಕೆಯಾಗಿದ್ದು ವಾರ್ಷಿಕ 7 ರೂ. ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಈ ಪೈಕಿ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಹಾಗೂ T20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಅಲ್ಲದೇ RCB ಮಾಜಿ ನಾಯಕಾಗಿರುವ ಅವರು IPL ಒಂದು ಸೀಸನ್ಗೆ 15 ಕೋಟಿ ರೂ. ಗಳಿಸುತ್ತಾರೆ. ಜೊತೆಗೆ ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್ ಬಿಝ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ 7 ಸ್ಟಾರ್ಟ್-ಅಪ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಅಲ್ಲದೇ 18 ಸಂಸ್ಥೆಗಳ ಜಾಹೀರಾತುಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ಕಿಂಗ್ ಕೊಹ್ಲಿ ಪ್ರತಿ ಬ್ರ್ಯಾಂಡ್ನ ಜಾಹೀರಾತಿಗೂ 7.50 ಕೋಟಿ ರೂ. ನಿಂದ 10 ಕೋಟಿ ರೂ. ಪಡೆಯುತ್ತಾರೆ. ಇದರಿಂದಲೇ ಅವರು ವಾರ್ಷಿಕವಾಗಿ ಸುಮಾರು 175 ಕೋಟಿ ರೂ. ಗಳಿಸುತ್ತಾರೆ. ಅಷ್ಟೇ ಅಲ್ಲ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ನಿಂದ 8.9 ಕೋಟಿ ರೂ., ಒಂದು ಟ್ವಿಟ್ಟರ್ ಪೋಸ್ಟ್ನಿಂದ 2.5 ಕೋಟಿ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಆಸ್ತಿಗಳ ಮೇಲೂ ಸಾಕಷ್ಟು ಹೂಡಿಕೆ ಮಾಡಿರುವ ಕೊಹ್ಲಿ ಮುಂಬೈನಲ್ಲಿ 34 ಕೋಟಿ ರೂ. ಬೆಲೆ ಬಾಳುವ ಹಾಗೂ ಗುರುಗ್ರಾಮ್ನಲ್ಲಿ 80 ಕೋಟಿ ಮೌಲ್ಯದ ಮನೆಯನ್ನ ಹೊಂದಿದ್ದಾರೆ. 31 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರನ್ನೂ ಹೊಂದಿದ್ದಾರೆ.