ಬೆಂಗಳೂರು ;– ರಾಜ್ಯ ಕಾಂಗ್ರೆಸ್ ನಾಯಕರು ಮೋದಿ ಕಡೆ ಬೆರಳು ಮಾಡದೆ ಅಕ್ಕಿ ಕೊಡಿ ಎಂದು ಮಾಜಿ ಶಾಸಕ ಸಿ ಟಿ ರವಿ ಒತ್ತಾಯ ಮಾಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಕ್ಕಿ ವಿತರಣೆಯ ಹೆಸರಲ್ಲಿ ರಾಜಕಾರಣ ಮಾಡದೆ ಮತ್ತು ಕೇಂದ್ರದ ಮೇಲೆ ಗೂಬೆ ಕೂರಿಸುವ ಸಣ್ಣತನ ತೋರದೆ ಬಡವರ ಆಹಾರದ ಅಗತ್ಯವನ್ನು ಪೂರೈಸಲು ಸೂಕ್ತ ಹಾಗು ಅಗತ್ಯವಿರುವ ಆಹಾರವನ್ನು ಅಥವಾ ಅದರ ಮೌಲ್ಯದಷ್ಟು ಹಣವನ್ನು ನೀಡಲು ವ್ಯವಸ್ಥೆ ಮಾಡಬೇಕು.
ಕೇಂದ್ರ ಸರ್ಕಾರ ಮುಂಗಾರು ಮಳೆ, ಬೆಳೆಯನ್ನು ಆಧರಿಸಿ ಕೇಂದ್ರದಲ್ಲಿರುವ ದಾಸ್ತಾನನ್ನು ಪರಿಗಣಿಸಿ ಫುಡ್ ಸೆಕ್ಯೂರಿಟಿ ಆಕ್ಟ್ ಪ್ರಕಾರ ಉಚಿತವಾಗಿ ಅಕ್ಕಿ ಕೊಡಬೇಕಾಗಿರುವ ಸರಬರಾಜಿಗೆ ಯಾವುದೇ ಭಂಗವಾಗದಂತೆ ಕಾಲಕಾಲಕ್ಕೆ ಇಂತಹ ನಿರ್ಣಯ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ. ಈಗಾಗಲೇ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಐದು ಕೆಜಿ ಉಚಿತ ಅಕ್ಕಿಯನ್ನು ನಿರಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ. ಪ್ರತಿ ಕುಟುಂಬದ ಅಕ್ಕಿಯ ಅವಶ್ಯಕತೆಯನ್ನು ಕೇಂದ್ರ ಸರ್ಕಾರವೇ ಪೂರೈಸುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಅಕ್ಕಿಯ ಜೊತೆಗೆ ರಾಗಿ, ಗೋಧಿ, ಬೆಳೆ ಮತ್ತು ರವೆಯನ್ನು ನೀಡಬಹುದಾಗಿದೆ. ತಾನು ವಾಗ್ದಾನ ಮಾಡಿರುವಂತೆ 10 ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸಮ ಮೊತ್ತದ ಹಣವನ್ನು ನೀಡಬಹುದಾಗಿದೆ ಎಂದು ಒತ್ತಾಯಿಸಿದ್ದಾರೆ.