ಬೆಂಗಳೂರು ;- ಅನ್ನದಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಜನರ ಪಾಠ ಕಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೇಂದ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಡಿಕೆಶಿ, ನಾವು ಪುಕ್ಸಟ್ಟೆ ಅಕ್ಕಿ ನೀಡಿ ಎಂದು ಕೇಳುತ್ತಿಲ್ಲ. ಆದರೂ ಅವರು ತಮ್ಮ ನೀತಿ ಬದಲಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ.
ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಹಸಿವು ಮುಕ್ತ ರಾಜ್ಯ ಮಾಡಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿಪಡಿಸಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ನೀಡುತ್ತೇವೆ. ಅದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜೊತೆ ಸಂಪರ್ಕ ಮಾಡುತ್ತಿದ್ದಾರೆ. 5 ಕೆ.ಜಿ ಯಷ್ಟು ನೀಡಲು ನಮ್ಮ ಬಳಿ ಅಕ್ಕಿ ಇದೆ. ಉಳಿದ 5 ಕೆ ಜಿಗೆ ಹೊಂದಿಸುತ್ತಿದ್ದೇವೆ. ಕೆಲವರು ನಮಗೆ ಅಕ್ಕಿ ಬದಲು ರಾಗಿ, ಜೋಳ ಕೇಳುತ್ತಿದ್ದಾರೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ ಎಂದರು.
ಯಡಿಯೂರಪ್ಪ, ಬೊಮ್ಮಾಯಿ ಅವರೇ, ನಿಮ್ಮ ಪಕ್ಷ ಹೇಳಿದಂತೆ, ನೀವು ಇನ್ನೂ ಯಾಕೆ ಎಲ್ಲರ ಖಾತೆಗೆ 15 ಲಕ್ಷ ಹಾಕಿಸಿಲ್ಲ, ರೈತರ ಆದಾಯ ಡಬಲ್ ಯಾಕೆ ಮಾಡಿಲ್ಲ? ಯುವಕರಿಗೆ ಯಾಕೆ ಉದ್ಯೋಗ ನೀಡಿಲ್ಲ? ಈ ಬಗ್ಗೆ ನೀವು ಮೊದಲು ಉತ್ತರ ನೀಡಿ, ಹೋರಾಟ ಮಾಡಿ. ಅದನ್ನು ಬಿಟ್ಟು ದಿನಬೆಳಗಾದರೆ ಯಡಿಯೂರಪ್ಪ, ಕಟೀಲ್, ಅಶೋಕ್ ಎಲ್ಲರೂ ಒಂದೊಂದು ವ್ಯಂಗದ ಮಾತು ಆಡುತ್ತಿದ್ದಾರೆ.
ಆಹಾರ ಬದ್ಧತೆ ವಿಚಾರದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬುದು ಕಾಂಗ್ರೆಸ್ ಸಂಕಲ್ಪ. ಇಂದು ಕೇಂದ್ರ ಸರ್ಕಾರದ ಬಡವರ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಬಡವರ ಹೊಟ್ಟೆ ತುಂಬುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣದ ವಿರುದ್ಧ ಇಂದು ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.