ನವದೆಹಲಿ: ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಇದು ಅವರ ಐತಿಹಾಸಿಕ ಪ್ರವಾಸವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.
ಮೋದಿ ಅವರನ್ನು ಅಮೆರಿಕ ಸರ್ಕಾರವೇ ಆಹ್ವಾನಿಸಿದ್ದು, ಅಮೆರಿಕ ಆಹ್ವಾನಿತರಾಗಿ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ 2ನೇ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿ ಪಾತ್ರರಾಗಲಿದ್ದಾರೆ. ಜತೆಗೆ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ವಿಶ್ವದ 3ನೇ ನಾಯಕ ಎನಿಸಿಕೊಳ್ಳಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ದೆಹಲಿಯಿಂದ ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿರ್ಗಮನ ಸಂದೇಶದಲ್ಲಿ, ತಮ್ಮ ಭೇಟಿಯು ಅಮೆರಿಕ ಜೊತೆಗಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದಿದ್ದಾರೆ. ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಒಳಗೊಂಡಿರಲಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಕಾಂಗ್ರೆಸ್ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಉದ್ಯಮಿಗಳನ್ನು, ಅನಿವಾಸಿ ಭಾರತೀಯರನ್ನು ಮೋದಿ ಭೇಟಿಯಾಗಲಿದ್ದಾರೆ. ವ್ಯಾಪಾರ, ವಾಣಿಜ್ಯ, ತಂತ್ರಜ್ಞಾನ, ನಾವೀನ್ಯತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.