ನವದೆಹಲಿ: ಈಗಾಗಲೇ ರಾಜಕೀಯ ಬಣ್ಣ ಪಡೆದಿದ್ದ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟ ಈಗ ಮತ್ತಷ್ಟು ರಾಜಕೀಯ ವಾಕ್ಸಮರ, ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ. ಶನಿವಾರವಷ್ಟೇ ತಮ್ಮ ಪ್ರತಿಭಟನೆಗೆ ಅವಕಾಶ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದು ಬಿಜೆಪಿ ನಾಯಕಿ ಬಬಿತಾ ಫೋಗಟ್ ಎಂದು ಅಚ್ಚರಿಯ ಹೇಳಿಕೆ ನೀಡಿದ್ದ ಕುಸ್ತಿಪಟು ಸಾಕ್ಷಿ ಮಲಿಕ್, ತಾವು ಹೇಳಿದ್ದು ವ್ಯಂಗ್ಯವಾಗಿ ಎಂದು ತಿಳಿಸಿ ಬಬಿತಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಹೋರಾಟವನ್ನು ಬಬಿತಾ ದುರ್ಬಲಗೊಳಿಸಲು ಪ್ರಯತ್ನಿಸಿದರು ಎಂದು ಸಾಕ್ಷಿ ಭಾನುವಾರ ಟ್ವೀಟ್ ಮೂಲಕ ಆರೋಪಿಸಿದ್ದು, ಹೋರಾಟವನ್ನು ಅವರು ಸ್ವಾರ್ಥಕ್ಕೆ ಬಳಸಿದರು ಎಂದಿದ್ದಾರೆ. ‘ತೀರ್ಥ್ ರಾಣಾ ಹಾಗೂ ಬಬಿತಾ ನಮ್ಮ ಪ್ರತಿಭಟನೆಯನ್ನು ಸ್ವಾರ್ಥಕ್ಕೆ ಬಳಸಲು ಯತ್ನಿಸಿದರು. ನಾವು ಸಂಕಷ್ಟದಲ್ಲಿದ್ದಾಗ ಅವರು ಸರ್ಕಾರದ ಪರ ನಿಂತರು. ನಾವು ಬಹಳ ಸಂಕಷ್ಟದಲ್ಲಿದ್ದೇವೆ’ ಎಂದಿದ್ದಾರೆ. ಈ ಮೊದಲು ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ್ದಾಗ, ವಿನೇಶ್ ಫೋಗಾಟ್ ತಮ್ಮ ಸೋದರ ಸಂಬಂಧಿ ಬಬಿತಾಗೆ ‘ನಮ್ಮ ಹೋರಾಟ ದುರ್ಬಲಗೊಳಿಸಲು ಪ್ರಯತ್ನಿಸಬೇಡಿ’ ಎಂದು ಮನವಿ ಮಾಡಿದ್ದರು.