ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸಲು ಕರ್ನಾಟಕ ಸರ್ಕಾರ ಆದೇಶಿಸಿದೆ. 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡುವಂತೆ ಇಂದು(ಜೂನ್ 21) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶುಭ ಕಲ್ಯಾಣ್ ನಿರ್ದೇಶಕರು ಪಿ. ಎಂ. ಪೋಷಣ್, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ವಿತರಿಸುವಂತೆ ಸೂಚಿಸಿದ್ದಾರೆ.
23 ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಫಲಾನುಭವಿ ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರು ಹಿಂದಿನ ಸಾಲಿನ ಮಾರ್ಗಸೂಚಿಯಂತೆ ಎಸ್ಡಿಎಂಸಿ ನೇತೃತ್ವದಲ್ಲಿ ಅಗತ್ಯ ಕ್ರಮಕೈಗೊಂಡು ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವಂತೆ ತಿಳಿಸಿದೆ.