ಚಿಕ್ಕಮಗಳೂರು: 2 ಲಕ್ಷ ಟನ್ ಅಕ್ಕಿ ಬೇಡಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಪ್ರಧಾನ ಮಂತ್ರಿಗಾಗಲಿ, ಕೇಂದ್ರ ಆಹಾರ ನಾಗರಿಕ ಸರಬರಾಜು ಸಚಿವರಿಗಾಗಲಿ ಬೇಡಿಕೆ ಇಡಲೇ ಇಲ್ಲ. ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರಲು ಹರ ಸಾಹಸಪಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ.ಟಿ.ರವಿ ಆರೋಪಿಸಿದರು. ರಾಜ್ಯ ಸರ್ಕಾರ 2 ಲಕ್ಷ ಟನ್ ಅಕ್ಕಿಗಾಗಿ ಎಫ್ಸಿಐ ವಿಭಾಗೀಯ ವ್ಯವಸ್ಥಾಪಕರಿಗೆ ಜೂ.9ರಂದು ಪತ್ರ ಬರೆದಿದೆ.
ಇದಕ್ಕೆ ಜೂ.12ರಂದು ಅನುಮತಿಯನ್ನೂ ನೀಡಲಾಗಿದೆ. ಜೂ.13 ರಂದು ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಯಿಂದ ಎಫ್ಸಿಐ ಕೇಂದ್ರ ಕಚೇರಿಗೆ ಎಂಓಎಸ್ಎಸ್ ಕೋಟಾದಡಿ ಅಕ್ಕಿ ಮಾರಾಟವನ್ನು ನಿಬಂರ್ಧಿಸಿರುವ ಬಗ್ಗೆ ಆದೇಶ ಬಂದಿದೆ. ಜೂ.8ರಂದು ನಡೆದ ಸಭೆಯಲ್ಲೇ ಇದು ತೀರ್ಮಾನವಾಗಿದೆ ಎಂದರು. ಈ ಪತ್ರವು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರವಲ್ಲ, ಬದಲಿಗೆ ಎಫ್ಸಿಐ ಮುಖ್ಯಸ್ಥರಿಗೆ ಬರೆದಿರುವ ಪತ್ರ. ಅಂದರೆ, ಇದು ರಾಜ್ಯ ಸರ್ಕಾರ ಎಫ್ಸಿಐಗೆ ಪತ್ರ ಬರೆಯುವ ಒಂದು ದಿನ ಮುಂಚಿತವಾಗಿಯೇ ತೆಗೆದುಕೊಂಡ ತೀರ್ಮಾನ ಎಂದು ಸ್ಪಷ್ಟಪಡಿಸಿದರು.