ಆಸ್ಟ್ರೇಲಿಯಾ ಎದುರು ನಡೆದ 2ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಬ್ಯಾಟರ್ಗಳ ಹೀನಾಯ ಪ್ರದರ್ಶನ ಕಾರಣ ಭಾರತ ತಂಡ 209 ರನ್ಗಳ ಹೀನಾಯ ಸೋಲುಂಡಿದೆ. ಇದರ ಬೆನ್ನಲ್ಲೇ ಭಾರತೀಯ ಬ್ಯಾಟರ್ಗಳು ಭಾರಿ ಟೀಕೆ ಎದುರಿಸಿದ್ದರು. ಪ್ರಮುಖವಾಗಿ ಟೆಸ್ಟ್ ಸ್ಪೆಷಲಿಸ್ಟ್ 3ನೇ ಕ್ರಮಾಂಕದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ತಮ್ಮ ಅಸ್ಥಿರ ಪ್ರದರ್ಶನ ಕಾರಣ ಭಾರಿ ಟೀಕೆ ಎದುರಿಸಿದರು. ಈಗ ಭಾರತ ತಂಡದ ವೈಫಲ್ಯಕ್ಕೆ ಬಲಿಪಶುವಾಗಿ ಪೂಜಾರ ಭಾರತ ತಂಡದಿಂದ ಕೈಬಿಡಲಾಗಿದೆ ಎಂದು ಗವಾಸ್ಕರ್ ಜಾಡಿಸಿದ್ದಾರೆ.
“ತಂಡದ ಎಲ್ಲಾ ಬ್ಯಾಟರ್ಗಳು ವೈಫಲ್ಯ ಕಂಡ ಸಂದರ್ಭದಲ್ಲಿ ಕೇವಲ ಒಬ್ಬರಿಗೆ ಶಿಕ್ಷೆಯೇಕೆ? ನನ್ನ ಪ್ರಕಾರ ಅಜಿಂಕ್ಯ ರಹಾನೆ ಹೊರತಾಗಿ ಉಳಿದ ಯಾವ ಬ್ಯಾಟರ್ಗಳಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ರಹಾನೆ 89 ಮತ್ತು 46 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ಗಳು ರನ್ ಗಳಿಸುವ ಗೋಜಿಗೆ ಬೀಳಲಿಲ್ಲ. ಹೀಗಿರುವಾಗ ಚೇತೇಶ್ವರ್ ಪೂಜಾರ ಅವರನ್ನು ಮಾತ್ರವೇ ಕೈಬಿಟ್ಟಿದ್ದೇಕೆ? ಬ್ಯಾಟಿಂಗ್ ವೈಫಲ್ಯ ಅವರನ್ನು ಮಾತ್ರ ಬಲಿಪಶು ಮಾಡಿದ್ದೇಕೆ? ಆತ ಭಾರತ ಟೆಸ್ಟ್ ತಂಡದ ಪರ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾನೆ. ಆತನಿಗೆ ಬಹುಕೋಟಿ ಫಾಲೋವರ್ಸ್ ಇಲ್ಲ ಎಂದಮಾತ್ರಕ್ಕೆ ಸೆಲೆಕ್ಟರ್ಸ್ ತಮ್ಮ ಮನಬಂದಂತೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ,” ಎಂದು ಗವಾಸ್ಕರ್ ಟೀಮ್ ಇಂಡಿಯಾ ಆಯ್ಕೆದಾರರ ವಿರುದ್ಧ ಗುಡುಗಿದ್ದಾರೆ.
ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟಿರುವ ನಿರ್ಧಾರ ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಅವರನ್ನು ಕೈಬಿಟ್ಟಿರುವುದಕ್ಕೆ ಇರುವ ಕಾರಣಗಳಾದರೂ ಏನು? ಯಾವ ಮಾನದಂಡ ಅನುಸರಿಸಿದ್ದೀರಿ? ಅವರು ಕೌಂಟಿ ಕ್ರಿಕೆಟ್ ಕೂಡ ಆಡಿದ್ದಾರೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಅಪಾರ ಅನುಭವ ಅವರಲ್ಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 39-40 ವರ್ಷಗಳ ವರೆಗೂ ಆಡಬಹುದು. ರನ್ ಗಳಿಸುತ್ತಿದ್ದು, ವಿಕೆಟ್ಗಳನ್ನು ಪಡೆಯುತ್ತಿರುವಾಗ ವಯಸ್ಸಿನ ಲೆಕ್ಕಾಚಾರ ಬರುವುದಿಲ್ಲ. ಕೇವಲ ವಯಸ್ಸೊಂದನ್ನೇ ಪರಿಗಣಿಸಿ ತಂಡದಿಂದ ಕೈಬಿಡುವುದು ಸರಿಯಲ್ಲ,” ಎಂದಿದ್ದಾರೆ.