ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಈಗ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಹಗ್ಗಜಗ್ಗಾಟ ಜೋರಾಗಿದೆ. ಈ ಕುರಿತು ಬಿಜೆಪಿ ನಾಯಕರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ (CT Ravi)ಅವರು ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಮ್ಮೆ ರಾಜೀನಾಮೆ ನೀಡಿದ್ದೇನೆ ಅಂತಾರೆ. ಆಮೇಲೆ ಇಲ್ಲ ಅಂತಾರೆ. ಆರ್.ಅಶೋಕ್ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ. ಪಾರ್ಲಿಮೆಂಟ್ ಎಲೆಕ್ಷನ್ ವೇಳೆ ಬದಲಾವಣೆ ಇಲ್ಲ ಅನಿಸುತ್ತೆ. ನನ್ನ ಗಮನಕ್ಕೆ ಬಂದಿಲ್ಲ ಅಂತಾರೆ. ಆದರೆ ಸಿ.ಟಿ.ರವಿ ಅವರು ಈ ಪ್ರಶ್ನೆಗೆ ನಾನು ಉತ್ತರ ನೀಡಲ್ಲ. ಸಾರಿ ಟು ಸೆ. ಐ ವಿಲ್ ನಾಟ್ ಆನ್ಸರ್ ದಿಸ್ ಕ್ವಷ್ಚನ್ ಎಂದಿದ್ದಾರೆ.
ಸಿ.ಟಿ.ರವಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನಾನು ಯಾವುದೇ ರೇಸ್ನಲ್ಲಿ ಇಲ್ಲ. ನಾನು ಈಗಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಕಾರ್ಯಕರ್ತ ಅನ್ನೋದನ್ನ ಯಾವತ್ತೂ, ಯಾರು ಕಿತ್ತುಕೊಳ್ಳಲು ಆಗುವುದಿಲ್ಲ. ಪಕ್ಷ ನನಗೆ ಎಕ್ಸ್ಪೀರಿಯನ್ಸ್ ಆಗಲು ಹಾಗೂ ಎಕ್ಸ್ಪೋಸ್ ಆಗೋದಕ್ಕೆ ಎರಡಕ್ಕೂ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ನಾನು ಯಾವ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಒಂಬತ್ತು ವರ್ಷದ ಸಾಧನೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ನರೇಂದ್ರ ಮೋದಿ ಸರ್ಕಾರವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಎಲ್ಲರೂ ಪಣ ತೊಡಬೇಕು ಎಂದಿದ್ದಾರೆ.