ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು 17 ವಿರೋಧ ಪಕ್ಷಗಳು ಬಿಹಾರದಲ್ಲಿ ಪಾಟ್ನಾದಲ್ಲಿ ಸಭೆ ನಡೆಸಿದ್ದು, ಎಲ್ಲರೂ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಈ ಮಧ್ಯೆ ಸಭೆ ಮುಗಿಸಿ ದೆಹಲಿಗೆ ವಾಪಸಾದ ಕೆಲವೇ ನಿಮಿಷಗಳಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಕಾಂಗ್ರೆಸ್ ಧೋರಣೆಯನ್ನು ಖಂಡಿಸಿ ಒಡಕಿನ ಮಾತುಗಳನ್ನೂ ಆಡಿದ್ದಾರೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ಪ್ರತಿಪಕ್ಷಗಳ ಮುಂದಿನ ಸಭೆಗೆ ಪಕ್ಷ ಭಾಗವಹಿಸುವುದು ಕಷ್ಟ ಎಂದು ವಿಪಕ್ಷ ಕೂಟಕ್ಕೆ ಎಎಪಿ ನಾಯಕರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಕುರಿತು ಮಾತನಾಡಿದ ಬಿಜೆಪಿ ಹಿರಿಯ ಸಂಸದ ರವಿಶಂಕರ್ ಪ್ರಸಾದ್(Ravi Shankar Prasad), ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಸೇರಿದಂತೆ ಎಲ್ಲರೂ ಹಗಲುಗನಸು ಕಾಣುತ್ತಿದ್ದಾರೆ. ಅವರ (ವಿರೋಧ) ಮೈತ್ರಿಕೂಟ ಎಷ್ಟು ಪ್ರಬಲವಾಗಲಿದೆ ಎಂಬುದನ್ನು ನಾವು ನೋಡುತ್ತೇವೆ ಎಂದರು. ವಿಪಕ್ಷಗಳ ಮೈತ್ರಿಕೂಟ ರಚನೆಯಿಂದ ಅವರಿಗೆ ಯಾವುದೇ ರಾಜಕೀಯ ಲಾಭ ಆಗಲ್ಲ, ಇದು ಎಷ್ಟು ದಿನ ಉಳಿಯುತ್ತದೆ ಎಂಬುದು ಸಹ ಖಚಿತವಾಗಿಲ್ಲ. ಕೇಜ್ರಿವಾಲ್ ಈಗಾಗಲೇ ಓಡಿ ಹೋಗಿದ್ದಾರೆ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.