ನಾಲ್ಕು ದಿನಗಳ ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಈಜಿಪ್ಟ್ ಗೆ ಭೇಟಿ ನೀಡಿರುವ ಮೊದಿ ಇಂದು ಈಜಿಪ್ಟ್ನ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.
ಈಜಿಪ್ಟ್ನ ಕೈರೋದಲ್ಲಿರುವ 11ನೇ ಶತಮಾನದಲ್ಲಿ ನಿರ್ಮಾಣವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿರುವ ಅಲ್-ಹಕೀಮ್ ಮಸೀದಿಗೆ ಮೋದಿ ಭೇಟಿ ನೀಡಲಿದ್ದಾರೆ. ಈ ವೇಳೆ ಮೋದಿ ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಿನ ಐತಿಹಾಸಿಕ ಬಾಂಧವ್ಯವು ಮತ್ತಷ್ಟು ಬಲಪಡಿಸಲಿದೆ.
ನಂತರ ಪ್ರಧಾನಿ ಮೋದಿ ಅವರು ಈಜಿಪ್ಟ್ನಲ್ಲಿ ನೆಲೆಸಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ಜನರ ನಡುವಿನ ಸಂಬಂಧವನ್ನು ಬೆಳೆಸುವುದು ಮಾತ್ರವಲ್ಲದೆ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಕೊಡುಗೆ ನೀಡಲು ವೇದಿಕೆಯನ್ನು ಕಲ್ಪಿಸುತ್ತದೆ.
ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫತ್ತಾಹ್ ಎಲ್ – ಸಿಸಿ ತಮ್ಮ ದೇಶಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು.