ಬೆಂಗಳೂರು: ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನಂಬಿದವನು ನಾನು. ಗೋವಿಂದರಾಜನಗರದಲ್ಲಿ 480 ಕೋಟಿಗೂ ಹೆಚ್ಚಿನ ಕೆಲಸ ಮಾಡಿರುವೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ಗೆಲ್ಲುತ್ತಿದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಎರಡರಲ್ಲೂ ಸೋತು ಈಗ ನಿರುದ್ಯೋಗಿ ಆಗಿದ್ದೇನೆ ಎಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ (Bengaluru) ಬಿಜೆಪಿ (BJP) ಕಚೇರಿಯಲ್ಲಿ ಭಾನುವಾರ ಮಾತಾಡಿದ ಅವರು, ನಾನು ಸನ್ಯಾಸಿ ಅಲ್ಲ. ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದೇನೆ. ಪಕ್ಷ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕು. ನಾನು ಪಕ್ಷ ಹೇಳಿದ ಕೆಲಸ ಮಾಡಿದ್ದೇನೆ. ಎಂಥಹ ಸಂದರ್ಭದಲ್ಲೂ ವಿಚಲಿತನಾಗಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದಿದ್ದರೆ ಬೇಸರ ಇಲ್ಲ ಎಂದಿದ್ದಾರೆ.
ಪಕ್ಷ ಕೊಟ್ಟಿರುವ ಟಾಸ್ಕ್ಗಳನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಇಲ್ಲಿಯವರೆಗೂ 12 ಚುನಾವಣೆಗಳನ್ನು ನೋಡಿದ್ದೇನೆ. 7 ರಿಂದ 8 ಉಪಚುನಾವಣೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಕ್ಷ ಕೊಟ್ಟಿದೆ. ಆದರೆ ಕಳೆದ ಒಂದೂವರೆ ತಿಂಗಳಿಂದ ನಿರುದ್ಯೋಗಿಯಾಗಿ ಕುಳಿತಿದ್ದೇನೆ ಎಂದಿದ್ದಾರೆ.
ನನ್ನ ಕ್ಷೇತ್ರ ಗೋವಿಂದರಾಜನಗರದಲ್ಲಿ ನನ್ನ ಅವಧಿಯಲ್ಲಿ ಮೂಲ ಸೌಕರ್ಯ ನೀಡಿ ಅಭಿವೃದ್ಧಿ ಮಾಡಿದ್ದೇನೆ. ಒಬ್ಬ ರಾಜಕಾರಣಿಯಾಗಿ ಪಕ್ಷದ ಸಂದೇಶವನ್ನು ಕ್ಷೇತ್ರದಲ್ಲಿ ತಲುಪಿಸಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಅದಕ್ಕಾಗಿ ಪಕ್ಷ ಕೊಟ್ಟ ಕೆಲಸ ಚಾಚೂ ತಪ್ಪದೇ ಮಾಡಬೇಕಾಗುತ್ತದೆ. ಚಿಂಚೋಳಿ ಉಪಚುನಾವಣೆ ವೇಳೆ ನೆತ್ತಿ ಸುಡುವ ಬಿಸಿಲಿನಲ್ಲಿ ಕೆಲಸ ಮಾಡಿದ್ದೇನೆ. ನನ್ನ ಜೊತೆ ಎಮ್ಎಲ್ಸಿ ರವಿಕುಮಾರ್ನನ್ನು ಮಾತ್ರ ಪಕ್ಷ ಕಳಿಸಿತ್ತು. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ, ಅಭ್ಯರ್ಥಿಯನ್ನೂ ಗೆಲ್ಲಿಸಿದೆ ಎಂದಿದ್ದಾರೆ.