ಆನೇಕಲ್ ;- ಕಲುಷಿತ ನೀರು ಕುಡಿದು ಹಸು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಜರುಗಿದೆ.
ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ನೀರನ್ನು ಶುದ್ಧೀಕರಿಸದೆ ಕಾರ್ಖಾನೆಗಳು ಚರಂಡಿಗೆ ಹರಿದುಬಿಡುತ್ತಿದ್ದು, ಇದರಿಂದ ನೀರು ಕಲುಷಿತಗೊಂಡಿದೆ. ಇದನ್ನು ಸೇವಿಸಿದ ಹಸು ಸಾವನ್ನಪ್ಪಿದೆ.
ಸುಶ್ಚಿತ್ ಹರ್ಬಲ್ಸ್,ಎಸ್ ಎಸ್ ಬಯೋಕೆಮ್ಸ್,ಗ್ರೀನ್ ಕೆಂ. ಲೇಕ್ ಕೆಮಿಕಲ್, ಫೈನ್ ಕಲರ್, ನ್ಯಾಚುರಲ್ ಕ್ಯಾಪ್ಸ್,ಕಟ್ರಾ,
ಸೋನಿಯಾ ಆರ್ಗನಿಕ್ಸ್ ಇನ್ನಿತರ ಕಾರ್ಖಾನೆಗಳು ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಸೇರಿದ್ದು, ಕಾನೂನುಗಳನ್ನು ಗಾಳಿಗೆ ತೂರಿ ಕೆಮಿಕಲ್ ನೀರನ್ನು ಹೊರಗೆ ಬಿಡುತ್ತಿವೆ.
ಮತ್ತೊಂದೆಡೆ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಹೊಗೆಯಿಂದಾಗಿ ಕಾಯಿಲೆ ಬರುವ ಸಾಧ್ಯತೆ ಇದ್ದು, ಸರ್ಕಾರಿ ಶಾಲೆಗಳಿದ್ದರೂ ಸಹ ರಾಜಾರೋಷವಾಗಿ ಕೆಮಿಕಲ್ ನೀರನ್ನು ಹೊರ ಬಿಡುತ್ತಿವೆ. ಇದರಿಂದ ಶಾಲಾ ಮಕ್ಕಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ ಗಬ್ಬು ವಾಸನೆಯಿಂದ ದಿನನಿತ್ಯ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ.
ಕೆಮಿಕಲ್ ನೀರು ಕುಡಿದು ಆಗಾಗ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಆದರೂ ಕೂಡ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ನೆರಳೂರು ಗ್ರಾಮ ಪಂಚಾಯಿತಿ ಹಾಗೂ ಮಾಲಿನ್ಯ ಮಂಡಳಿ ಅಧಿಕಾರಿಗಳ ನಿರ್ಲಕ್ಷದಿಂದ ಹಸು ಸಾವನ್ನಪ್ಪಿದೆ.