ಬಿಜೆಪಿಯಲ್ಲಿ (BJP) ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗ್ತಾನೇ ಇದೆ, ಅಧ್ಯಕ್ಷ ಸ್ಥಾನ ನನಗೆ ಬೇಕು ಅಂತ ಮಾಜಿ ಸಚಿವ ವಿ. ಸೋಮಣ್ಣ ಪಟ್ಟು ಹಿಡಿದಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಸೋಮಣ್ಣ ಇದ್ದಕ್ಕಿದ್ದಂತೆ ಕಾರ್ಯಕಾರಿಣಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ, ಇತ್ತ ಮಾಜಿ ಸಿಎಂ ಬಿಎಸ್ವೈ ಪಕ್ಷದಲ್ಲಿ ಮತ್ತೆ ಸಕ್ರಿಯರಾಗ್ತಿದ್ದು ಹಿಡಿತ ಕೈತಪ್ಪದಂತೆ ಎಚ್ಚರಿಕೆ ವಹಿಸ್ತಿದ್ದಾರೆ. ಸೋಮಣ್ಣರನ್ನ ಬಿಎಲ್ ಸಂತೋಷ್ ಮುಂದೆ ಬಿಟ್ಟು ಗೇಮ್ ಶುರುಮಾಡಿದ್ರಾ ಅನ್ನೋ ಅನುಮಾನ ಶುರುವಾಗಿದ್ದು, ಮತ್ತೆ ಬಿಎಸ್ ವೈ BSY – Santosh ಸಂತೋಷ್ ಕೋಲ್ಡ್ ವಾರ್ ತಾರಕ್ಕೇರೊ ಲಕ್ಷಣಗಳು ಕಂಡುಬರ್ತಿವೆ.
ವಿಧಾನಸಭಾ ಚುನಾವಣೆಯಲ್ಲಿ ಸೋತುಸುಣ್ಣವಾಗಿರುವ ಬಿಜೆಪಿ ಪಕ್ಷ ಹೊಸ ಸಾರಥಿಯ ಹುಡುಕಾಟದಲ್ಲಿದೆ ಇಷ್ಟುದಿನ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಅಶ್ವಥ್ ನಾರಾಯಣ್, ಸಿಟಿ ರವಿ, ಶೋಭಾ ಕರಂದ್ಲಾಜೆ,ಸುನೀಲ್ ಕುಮಾರ್ ಅನ್ನೋ ಹೆಸರುಗಳು ಕೇಳಿಬರ್ತಿದ್ದೋ. ಇದೀಗ ಈ ರೇಸ್ ಗೆ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮಾಜಿ ಸಚಿವ ವಿ.ಸೋಮಣ್ಣ ಬಂದಿದ್ದು ರಣಾಂಗಣ ನಿಧಾನವಾಗಿ ರಂಗೇರ್ತಿದೆ. ಹೈಕಮಾಂಡ್ ಹೇಳಿದಂತೆ ಸ್ವಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ, ಚಾಮರಾಜನಗರ ದಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದ ಸೋಮಣ್ಣ ಇಷ್ಟು ದಿನ ಫುಲ್ ಸೈಲೆಂಟಾಗಿದ್ರು. ಕಟೀಲ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಬೆನ್ನಲ್ಲೇ ಸೋಮಣ್ಣ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲಿ ಇಂದಿನಿಂದ ಫುಲ್ ಆ್ಯಕ್ಟೀವ್ ಆಗಿದ್ದಾರೆ.
ಮಲ್ಲೇಶ್ವರಂ ನ ಬಿಜೆಪಿ ಕಛೇರಿಯಲ್ಲಿ ಕಾನೂನು ಪ್ರಕೋಷ್ಠಕದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡ ಸೋಮಣ್ಣ ಮತ್ತೆ ತಮ್ಮ ಹಳೆಯ ಖದರ್ ತೋರಿಸಿದ್ರು. ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ನನ್ನ ಕ್ಷೇತ್ರ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಸೋತೆ. ಫೋರ್ ಸಿಕ್ಸ್ ಹೊಡೆಯಲು ಹೋಗಿ ಈಗ ಬೋಲ್ಡ್ ಆಗಿದ್ದೇನೆ. ಪಕ್ಷ ಕೊಡುವ ಸಂದೇಶದ ಪ್ರಕಾರ ಕೆಲಸ ಮಾಡುತ್ತೇನೆ ಡಬಲ್ ಸ್ಟ್ಯಾಂಡರ್ಡ್ ನನಗೆ ಇಲ್ಲ. ನನಗಿಂತ ಬುದ್ದಿವಂತರು ಇದ್ದರೆ ಅವರಿಗೆ ಅವಕಾಶ ಕೊಡಿ ಇಲ್ಲದಿದ್ದರೆ ನನಗೆ ಅವಕಾಶ ಕೊಡಿ. ಅಧ್ಯಕ್ಷ ಸ್ಥಾನ ಕೈತಪ್ಪಿದರೆ ನಾನು ನಿದ್ದೆ ಮಾಡುವವನಲ್ಲ, ಯಾರನ್ನು ನಿದ್ದೆ ಮಾಡಲು ಬಿಡುವವನಲ್ಲ. ಹಿಂದೆ ಮುಂದೆ ಮಾತಾಡುವವರ ನೀತಿಪಾಠ ನನಗೆ ಗೊತ್ತು. ನಾನು ಕೇವಲ ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ತಮ್ಮ ವಿರೋದಿಗಳ ವಿರುದ್ಧ ಸೋಮಣ್ಣ ಗುಡುಗಿದ್ರು.
ಸೋಮಣ್ಣ ಇದ್ದಕ್ಕಿದ್ದಂತೆ ಆ್ಯಕ್ಟೀವ್ ಆಗಿರೋದ್ರ ಹಿಂದೆ ಬೇರೆಯದ್ದೇ ರಾಜಕೀಯ ಪ್ಲಾನ್ ಇದೆ ಎಂದು ಹೇಳಲಾಗ್ತಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೋಮಣ್ಣರನ್ನ ಮುಂದೆ ಬಿಟ್ಟು ಗೇಮ್ ಶುರುಮಾಡಿದ್ದಾರೆ ಎನ್ನಲಾಗ್ತಿದೆ. ಇತ್ತ ಮಾಜಿ ಸಿಎಂ ಬಿಎಸ್ ವೈ ಕೂಡ ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲೂ ಆಕ್ಟೀವ್ ಆಗಿದ್ದು ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಬೆಂಗಳೂರಿನ ಕಾರ್ಯಕಾರಣಿಗಳಲ್ಲಿ ಭಾಗಿಯಾಗ್ತಿದ್ದಾರೆ. ತಮ್ಮ ಆಪ್ತರಿಗೇ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿ ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ರಾಜಾಹುಲಿ ಪ್ಲಾನ್ ಮಾಡ್ತಿದ್ರೆ. ಬಿಎಲ್ ಸಂತೋಷ್ ತಮ್ಮ ಆಪ್ತರಿಗೆ ಅಧ್ಯಕ್ಷ ಸ್ಥಾನ ಕೊಡಿಸಿ ಬಿಎಸ್ ವೈ ಓಟಕ್ಕೆ ಬ್ರೇಕ್ ಹಾಕಿ ಪರ್ಮನೆಂಟ್ ರಿಟೈಡ್ ಮೆಂಟ್ ಕೊಟ್ಟು ಪಕ್ಷವನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಲು ಗೇಮ್ ಶುರುಮಾಡಿದ್ದಾರೆ….
ಚುನಾವಣಾ ಹೀನಾಯ ಸೋಲಿನ ಬಳಿಕ ತಣ್ಣಗಾಗಿದ್ದ ಬಿಜೆಪಿಯ ಬಣ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ. ಯಡಿಯೂರಪ್ಪ vs ಬಿಎಲ್ ಸಂತೋಷ್ ನಡುವಿನ ಕೋಲ್ಡ್ ವಾರ್ ಮತ್ತೆ ಶುರುವಾಗೋ ಲಕ್ಷಣಗಳು ಕಂಡುಬರ್ತಿದ್ದು. ಪಕ್ಷದ ಹಿಡಿತಕ್ಕಾಗಿ ಉಭಯ ನಾಯಕರು ತಮ್ಮದೇ ರಾಜಕೀಯ ದಾಳ ಉರುಳಿಸಿ ತಂತ್ರಗಾರಿಕೆ ಮಾಡ್ತಿದ್ದಾರೆ. ಇಬ್ಬರ ವಾರ್ ನಿಂದಲೇ ಹೀನಾಯವಾಗಿ ಸೋತಿದ್ದ ಕೇಸರಿಪಡೆ ಸಾರಥಿ ಆಯ್ಕೆಯನ್ನು ಹೇಗೆ ನಿಭಾಯಿಸುತ್ತೆ ಎಂಬುದನ್ನ ಕಾದುನೋಡಬೇಕಿದೆ….