ಕಠ್ಮಂಡು;– ವಿಶ್ವವಿಖ್ಯಾತ ನೇಪಾಳದ ಪಶುಪತಿನಾಥ ದೇಗುಲದಲ್ಲಿ 10 ಕೆಜಿ ಚಿನ್ನ ಕಳವಾಗಿರುವ ಹಿನ್ನೆಲೆ, ತನಿಖೆಗಾಗಿ ದೇವಸ್ಥಾನ ತಾತ್ಕಾಲಿಕ ಬಂದ್ ಮಾಡಲಾಗಿದೆ.
ನೇಪಾಳದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ದೇವಾಲಯವನ್ನು ತನಿಖೆಗಾಗಿ ವಶಕ್ಕೆ ಪಡೆದಿದೆ. ದೇವರ ಚಿನ್ನದ ಆಭರಣವು ಕಾಣೆಯಾದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದ ಬಳಿಕ ಸರ್ಕಾರವು ತನಿಖೆಗೆ ನಿರ್ದೇಶನ ನೀಡಿದೆ. ಇನ್ನು ದೇವಸ್ಥಾನದ ಆವರಣದಲ್ಲಿ ನೇಪಾಳ ಸೇನೆಯ ಯೋಧರು, ಹತ್ತಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತನಿಖಾ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
ನೇಪಾಳದ ಕಾಠ್ಮಂಡುವಿನ ಪೂರ್ವ ಭಾಗದ ಭಾಗವತಿ ನದಿಯ ದಡದಲ್ಲಿರುವ ಪಶುಪತಿನಾಥ ದೇವಾಲಯವು ವಿಶ್ವದ ಅತ್ಯಂತ ಮಹತ್ವ ಹಾಗೂ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಒಳಗೆ ಪ್ರವೇಶಿಸಲು ಕೇವಲ ಹಿಂದೂಗಳಿಗೆ ಮಾತ್ರ ಅವಕಾಶವಿತ್ತಂತೆ. ಉಳಿದವರು ದೇವಸ್ಥಾನದ ಇನ್ನೊಂದು ಭಾಗದಲ್ಲಿ ನಿಂತು ನೋಡಬಹುದಿತ್ತು. ಈ ದೇವಸ್ಥಾನವು ಅತ್ಯಂತ ಹಳೆಯ ದೇವಸ್ಥಾನವಾಗಿದ್ದು ಇದು ಯಾವಾಗ ನಿರ್ಮಾಣವಾಯಿತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದ್ರೆ ಕೆಲವು ಕುರುಹುಗಳ ಅಂದಾಜಿನ ಆಧಾರದ ಮೇಲೆ 400 ವರ್ಷಗಳಷ್ಟು ಹಳೆಯ ದೇವಸ್ಥಾನ ಎಂದು ಹೇಳಲಾಗುತ್ತೆ.