ಕೈರೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಈಜಿಪ್ಟ್ ಪ್ರವಾಸದಲ್ಲಿದ್ದಾರೆ. ಶನಿವಾರ ಹಾಗೂ ಭಾನುವಾರ ಈಜಿಪ್ಟ್ ಗೆ ತೆರಳಿದ್ದು ಮೋದಿ ಅವರಿಗೆ ಈ ವೇಳೆ ಈಜಿಪ್ಟ್ ನ ಅತ್ಯುನ್ನತ ರಾಜ್ಯ ಗೌರವವಾದ ʼಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈಜಿಪ್ಟ್ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ದಿ ನೈಲ್ ಅನ್ನು ನೀಡಿ ಗೌರವಿಸಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿ ಅವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.
ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯು 3 ಚದರ ಯುನಿಟ್ಗಳನ್ನೊಳಗೊಂಡ ಶುದ್ಧ ಚಿನ್ನದ ಮಾಲೆಯಾಗಿದೆ. ಅದರ ಮೇಲೆ ಫರೋನಿಕ್ ಚಿಹ್ನೆಗಳಿದ್ದು, ಮೊದಲ ಯುನಿಟ್ನಲ್ಲಿ ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆಯನ್ನು ಹೋಲುತ್ತದೆ. ಎರಡನೇ ಘಟಕದಲ್ಲಿ ನೈಲ್ ನದಿಯಿಂದಾದ ಸಮೃದ್ಧಿ ಹಾಗೂ ಸಂತೋಷವನ್ನು ಹೋಲುತ್ತದೆ ಮತ್ತು ಮೂರನೇ ಘಟಕದಲ್ಲಿ ಸಂಪತ್ತು ಹಾಗೂ ಸಹಿಷ್ಣುತೆಯನ್ನು ಸೂಚಿಸುತ್ತದೆ.
ಅಮೂಲ್ಯ ಆಭರಣಗಳಿಂದ ಅಲಂಕರಿಸಲ್ಪಟ್ಟಿರುವ ವೃತ್ತಾಕಾರದ ಚಿನ್ನದ ಹೂವಿನ ಘಟಕಗಳು ಒಂದಕ್ಕೊಂದು ಸಂಪರ್ಕಿಸಿವೆ. ಮಾಲೆಯಲ್ಲಿ ಷಡ್ಭುಜಾಕೃತಿಯ ಪೆಂಡೆಂಟ್ ಇದ್ದು, ಅದರಲ್ಲಿ ಫರೋನಿಕ್ ಶೈಲಿಯ ಹೂವುಗಳು ಹಾಗೂ ರತ್ನಗಳಿಂದ ಅಲಂಕರಿಸಲಾಗಿದೆ.
ನೈಲ್ ಎಂಬುದು ಈಜಿಪ್ಟ್ನ ಪ್ರಮುಖ ನದಿಯಾಗಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ನದಿಯೂ ಆಗಿರುವುದರಿಂದ ಈಜಿಪ್ಟ್ನ ಅತ್ಯುನ್ನತ ಪ್ರಶಸ್ತಿಗೆ ನೈಲ್ ನದಿಯ ಹೆಸರು ಇಡಲಾಗಿದೆ.