ಬೆಂಗಳೂರು ;- ಬಕ್ರೀದ್ ಹಬ್ಬಕ್ಕೆ ಇನ್ನೂ ಮೂರು ದಿನ ಬಾಕಿ ಇರುವಂತೆ ರಾಜಧಾನಿ ಬೆಂಗಳೂರಿನಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ.
ನಾನಾ ಜಿಲ್ಲೆಗಳಿಂದ ವಿವಿಧ ತಳಿಗಳ ಕುರಿ ಹಾಗೂ ಮೇಕೆಗಳ ದಂಡುಗಳೊಂದಿಗೆ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಬಂಡೂರು, ಕಿರಿಗಾವು, ಮೌಳಿ, ಶಿರೋಹಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು, ಚಿತ್ರದುರ್ಗ ಮರಿ ಸೇರಿದಂತೆ ವಿವಿಧ ತಳಿಗಳು ಇಲ್ಲಿವೆ. ಬಂಡೂರು ಕುರಿಗಳು ಕನಿಷ್ಠ ₹ 15ಸಾವಿರದಿಂದ ಗರಿಷ್ಠ ₹ 90ಸಾವಿರದವರೆಗೆ ಮಾರಾಟವಾದರೆ, ಅಮೀನಗಡ ತಳಿಯ ಟಗರಿಗೆ ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 1.20ಲಕ್ಷದವರೆಗೂ ಬಿಕರಿಯಾಗುತ್ತಿವೆ’ ಎಂದು ವ್ಯಾಪಾರಿ ಚಿಕ್ಕಣ್ಣ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಅಮೀನಗಡದಿಂದ 60 ಟಗರು ತಂದಿದ್ದೇನೆ. 20 ಟಗರು ಮಾರಾಟವಾಗಿವೆ. ಈ ವರ್ಷ ವ್ಯಾಪಾರ ಕುಸಿದಿದೆ. ಕುರಿ, ಟಗರಿನ ಬೆಲೆಗೆ ಹೋಲಿಸಿದರೆ ಹಸು, ಎತ್ತುಗಳ ಬೆಲೆ ಕಡಿಮೆ. ಗ್ರಾಹಕರು ಅವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಮೂರು ದಿನಗಳಿವೆ. ಎಲ್ಲ ಟಗರು ಮಾರಾಟವಾಗುವ ನಿರೀಕ್ಷೆ ಇದೆ’ ಎಂದು ವ್ಯಾಪಾರಿ ಮಲೀಕ್ ವಿಶ್ವಾಸ ವ್ಯಕ್ತಪಡಿಸಿದರು.