ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು. ನಗರದ ಬಸವಭವನದಲ್ಲಿ ಜರುಗಿದ ಜಿಲ್ಲೆಯ ಪಕ್ಷದ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತಾಗಬೇಕು. ಈ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿದರೆ ಮಾತ್ರ ಭಾರತ ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಭಾರತ ಜಾಗತಿಕವಾಗಿ ಬೆಳೆದು ನಿಲ್ಲಲು ಸಾಧ್ಯ ಎಂದರು.
ಜಿಪಂ, ತಾಪಂ ಚುನಾವಣೆಗಳು ಸನಿಹದಲ್ಲಿವೆ. ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಬೇಕು. ಈ ದಿಸೆಯಲ್ಲಿ ಎಲ್ಲ ಕಾರ್ಯಕರ್ತರು ಕೆಲಸ ಆರಂಭಿಸಿ. ವಿಧಾನಸಭಾ ಚುನಾವಣೆಯಿಂದ ಕಂಗಾಲಾಗುವುದು ಬೇಡ. ಸೋಲಿನ ಮಧ್ಯೆ ಕಾರ್ಯಕರ್ತರು ಉತ್ಸಾಹದಿಂದ ಕಾರ್ಯ ನಿರ್ವಹಿಸಿ ಎಂದು ಕಟೀಲ್ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಬಿಜೆಪಿ ಅಂತಹ ಸುಳ್ಳುಗಳನ್ನು ನೀಡಿ ಅಧಿಕಾರಕ್ಕೆ ಬರುವುದಿಲ್ಲ. ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಚಿಂತನೆ ಮಾಡುತ್ತದೆಯೇ ಹೊರತು, ಅಧಿಕಾರಕ್ಕೆ ಹಪಾಹಪಿಸುವ ಪಕ್ಷ ನಮ್ಮದಲ್ಲ. ದೇಶದ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆಯೇ ಹೊರತು, ಅಧಿಕಾರಕ್ಕೆ ಬರಲು ಸುಳ್ಳುಗಳನ್ನು ಹೇಳುವ ಜಾಯಮಾನ ನಮ್ಮದಲ್ಲ ಎಂದರು.
ಬಿಟ್ಟಿ ಯೋಜನೆ ಜಾರಿಯಿಂದ ದೇಶಕ್ಕೆ ಆಪತ್ತು: ಸೇಡಂನ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಸೇಡಂ ಮಾತನಾಡಿ, ಬಿಜೆಪಿಯು ಸೈದ್ಧಾಂತಿಕ ನೆಲೆಯಲ್ಲಿ ರಾಜಕಾರಣ ಮಾಡುವ ಪಕ್ಷವೇ ಹೊರತು, ಅಧಿಕಾರಕ್ಕೆ ಹಾತೊರೆಯುವುದಿಲ್ಲ. ವಿರೋಧ ಪಕ್ಷಗಳ ಕುತಂತ್ರದಿಂದ ನಮಗೆ ಸೋಲಾಗಿರಬಹುದು. ಆದರೆ, ಜನರಿಗೆ ಇದು ಖಂಡಿತ ಮನವರಿಕೆಯಾಗುತ್ತದೆ ಎಂದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ ನಾಡಿಗೆ ಬರ ಬರುತ್ತದೆ. ಈ ಹಿಂದೆ ಸಿಎಂ ಆಗಿದ್ದಾಗ ಮಳೆ ಹೋಯಿತು. ಬರ ಬಂತು. ಈ ವರ್ಷ ಮತ್ತೆ ಸಿಎಂ ಆದರು. ನಾಡಿನಲ್ಲಿ ಮತ್ತೆ ಬರದ ಛಾಯೆ ಆವರಿಸಿದೆ ಎಂದು ಆಪಾದಿಸಿದರು.
ಸಂಸದ ವೈ. ದೇವೇಂದ್ರಪ್ಪ, ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್, ವಿಪ ಸದಸ್ಯ ವೈ.ಎಂ. ಸತೀಶ್, ಎಂ.ಪಿ. ಸುಮಾ, ಶಿಲ್ಪಾ ರಾಘವೇಂದ್ರ, ರೇಣುಕಾ ಪ್ರಸಾದ್, ಶಶಿಲ್ ನಮೋಶಿ, ಡಾ. ಮಹಿಪಾಲ್, ಕೆ.ಎ. ರಾಮಲಿಂಗಪ್ಪ, ಕೆ.ಎಂ. ಮಹೇಶ್ವರಯ್ಯಸ್ವಾಮಿ, ಎಚ್. ಹನುಮಂತಪ್ಪ, ಪಾರ್ವತಿ ಇಂದುಶೇಖರ್, ಎಸ್. ಗುರುಲಿಂಗನಗೌಡ, ಸಿದ್ದೇಶ್ ಯಾದವ್ ಇದ್ದರು. ಅನಿಲ್ ನಾಯ್ಡು ಮೋಕಾ ಕಾರ್ಯಕ್ರಮ ನಿರ್ವಹಿಸಿದರು.