ಅಡೂರು : ಅಡೂರಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಪ್ರೌಢಶಾಲಾ ವಿಭಾಗದ ಸೋಶಿಯಲ್ ಸಯನ್ಸ್ ಪಠ್ಯವನ್ನು ಕಲಿಸಲು ಕನ್ನಡ ತಿಳಿಯದ ಮಲಯಾಳಿ ಶಿಕ್ಷಕಿಯನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಡೂರು ಶಾಲೆಯ ಕನ್ನಡ ವಿದ್ಯಾರ್ಥಿಗಳು ಹಾಗೂ ಕನ್ನಡ ಪೋಷಕರು ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಪ್ರತೀ ಮಗುವಿಗೂ ಕೂಡಾ 6ರಿಂದ 14ನೇ ವಯಸ್ಸಿನ ತನಕ ಮಗುವಿನ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಕಾನೂನು ಇದೆ. ಆದರೆ ಅಡೂರು ಶಾಲೆಯಲ್ಲಿ ಕೇರಳ ಶಿಕ್ಷಣ ಇಲಾಖೆಯು ಮಕ್ಕಳ ಮಾತೃಭಾಷಾ ಶಿಕ್ಷಣದ ಹಕ್ಕನ್ನು ಕಸಿಯುತ್ತಿದೆ. ಕನ್ನಡ ಮಕ್ಕಳಿಗೆ ಕನ್ನಡ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯಬೇಕಿದೆ.
ಈಗ ನೇಮಕವಾದ ಶಿಕ್ಷಿಕಿಗೆ ಸರಿಯಾಗಿ ಕನ್ನಡ ಬರೆಯಲು ಹಾಗೂ ಓದಲು ಬರುತ್ತಿಲ್ಲ. ಅವರ ಪಾಠ ಏನೇನೂ ಅರ್ಥವಾಗುತ್ತಿಲ್ಲ ಎಂದು ಮಕ್ಕಳು ಹೇಳುತ್ತಿದ್ದಾರೆ. 10ನೇ ತರಗತಿಯ ತಮ್ಮ ಜೀವನದ ನಿರ್ಣಾಯಕ ಪರೀಕ್ಷೆಯನ್ನು ಎದುರಿಸಲು ಸಿದ್ಧರಾದ ಕನ್ನಡ ಮಕ್ಕಳಿಗೆ ನೇಮಕವಾದ ಮಲಯಾಳಿ ಮಾತೃಭಾಷೆಯ ಶಿಕ್ಷಕಿಯಿಂದ ಕಲಿಸಲು ಸಾಧ್ಯವಿಲ್ಲ. ಕನ್ನಡ ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಸರ್ಕಾರ ಒದಗಿಸಬೇಕು. ಈಗಾಗಲೇ ನೇಮಕವಾದ ಮಲಯಾಳಿ ಶಿಕ್ಷಕಿಯ ಬದಲು ಮಾತೃಭಾಷೆ ಕನ್ನಡವೇ ಆಗಿರುವ ಶಿಕ್ಷಕಿಯನ್ನು ಒದಗಿಸಬೇಕೆಂದು ಪೋಷಕರು ಒತ್ತಾಯಿಸಿದರು.