ಮಂಡ್ಯ :- ನರೇಗಾ ಯೋಜನೆಯ ಪಂಚ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಧನರಾಜ್ ಬೊರಾಳೆ ಸೋಮವಾರ ಹೇಳಿದರು. ಮದ್ದೂರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿಯಾದ ಬೊರಾಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ನರೇಗಾ ಯೋಜನೆ ಅನುಷ್ಠಾನದ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನರೇಗಾ ಯೋಜನೆಯ ಪಂಚ ಕಾರ್ಯಕ್ರಮ ಯೋಜನೆಗಳಾದ ಕೋಟಿ ವೃಕ್ಷ ಯೋಜನೆ, ಜೈವಿಕ ಅನಿಲ, ಹಸಿರು ಸರೋವರ, ಕೊಳವೆ ಬಾವಿಗಳ ಪುನಶ್ಚೇತನ, ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನವಾಗುತ್ತಿಲ್ಲ. ಹೀಗಾಗಿ ನರೇಗಾ ಯೋಜನೆಯ ಪ್ರಗತಿ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಪಂಚ ಕಾರ್ಯಕ್ರಮಗಳ ಬಗ್ಗೆ ಎಲ್ಲಾ 42 ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಯೋಜನೆ ಅನುಗುಣವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಪಂಚಾಯತ್ ರಾಜ್ ಉಪ ವಿಭಾಗದ ಅಧಿಕಾರಿಗಳು ತಮಗೆ ನಿಗದಿ ಪಡಿಸಿರುವ ಯೋಜನೆಯ ಗುರಿಯನ್ನು ನಿಗಧಿತ ಸಮಯದಲ್ಲಿ ಅನುಷ್ಟಾನಗೊಳಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಗ್ರಾಮ ಪಂಚಾಯಿತಿಗಳಿಂದ ಭೂ ಪರಿವರ್ತಿತಾ ಜಮೀನುಗಳ ವಸತಿಯೇತರ ಏಕ ಮತ್ತು ಬಹು ನಿವೇಶನಗಳ ವಿನ್ಯಾಸ ನಕ್ಷೆಗಳ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. 2023 -24 ನೇ ಸಾಲಿನ ತಾಲೂಕು ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಕುರಿತು ಅಧಿಕಾರಿಗಳು ವಿವರಣೆ ನೀಡಿದರು. ತಾ.ಪಂ ಇಓ ಎಲ್.ಸಂದೀಪ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಾಗಲಕ್ಷ್ಮಿ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಕೋದಂಡರಾಮ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಸಿಡಿಪಿಓ ನಾರಾಯಣ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಭಾನು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ