ಭುವನೇಶ್ವರ: ಇತ್ತೀಚೆಗಷ್ಟೇ ಭೀಕರ ರೈಲು ದುರಂತ (Odisha Train Accident) ಸಂಭವಿಸಿದ್ದ ಒಡಿಶಾದಲ್ಲಿ (Odisha) ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು 12 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಎರಡು ಬಸ್ಸುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮದುವೆ (Marriage) ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಬರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಎಂ. ಶರವಣ ವಿವೇಕ್ ತಿಳಿಸಿದ್ದಾರೆ. ಬರ್ಹಾಂಪುರದಲ್ಲಿ ವಿವಾಹಮಹೋತ್ಸವ ಮುಗಿಸಿ ಕೊಂಡು ಪ್ರಯಾಣಿಕರು ದಿಗಪಹಂಡಿ ಬಳಿಕ ಖಂಡದೇಲಿಗೆ ಹಿಂದಿರುಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ 12 ಮಂದಿ ಮೃತಪಟ್ಟಿದ್ದಾರೆ.
7 ಮಂದಿ ಗಾಯಗೊಂಡಿದ್ದು, ಅವರನ್ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಪ್ರತಿಯೊಬ್ಬರ ಚಿಕಿತ್ಸೆಗೆ ಒಡಿಶಾ ಸರ್ಕಾರ (Odisha Government) ತಲಾ 30 ಸಾವಿರ ರೂ. ಪರಿಹಾರ ಮಂಜೂರು ಮಾಡಿದೆ. ಸದ್ಯ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.