ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರವನ್ನು ಜೋಡಿಸುವ ಎಕ್ಸ್’ಪ್ರೆಸ್ ವೇ ಸಾವಿನ ಹೆದ್ದಾರಿಯಾಗಿ ಬದಲಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 100 ಮಂದಿ ಸಾವನ್ನಪ್ಪಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಸುರಕ್ಷತೆ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿ ವರ್ಗ ಸಿದ್ದತೆ ನಡೆಸ್ತಿದೆ.
ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಪ್ರತಿ ದಿನ ಸರಾಸರಿ 56 ಸಾವಿರ ವಾಹನಗಳು ಓಡಾಡುತ್ತವೆ ಎಂದು ಅಂದಾಜಿಸ ಲಾಗಿದೆ. ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಪ್ರಯಾಣದ ಅವಧಿ ಕೇವಲ 75 ನಿಮಿಷಕ್ಕೆ ಕಡಿತಗೊಂಡಿದೆ. ಜೊತೆಯಲ್ಲೇ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಪರ್ಕ ಕೊಂಡಿಯಾಗಿಯೂ ಈ ರಸ್ತೆ ಇದೆ. ರಾಮನಗರ ಹಾಗೂ ಮಂಡ್ಯ ಪೊಲೀಸರ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಈ ಹೆದ್ದಾರಿಯಲ್ಲಿ 79 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ.
ಇದಲ್ಲದೆ 226 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಒಟ್ಟು 94 ಮಂದಿ ಸಾವನ್ನಪ್ಪಿದ್ದು, 353 ಮಂದಿ ಗಾಯಗೊಂಡಿದ್ದಾರೆ. ಇನ್ನು ಇದೇ ಎಕ್ಸ್ಪ್ರೆಸ್ ವೇನ ಕೆಲವು ಕಿ. ಮೀ. ಹಾದಿ ಮೈಸೂರು ನಗರ ಪೊಲೀಸರ ವ್ಯಾಪ್ತಿಯಲ್ಲೂ ಇದೆ. ಈ ಭಾಗದಲ್ಲೂ ನಾಲ್ಕು ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತಕ್ಕೆ ಕಾರಣ ಏನು?
ಅತಿ ವೇಗದ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆಯೇ ಅಪಘಾತಕ್ಕೆ ಪ್ರಮಾಣ ಕಾರಣ ಎನ್ನುತ್ತಾರೆ ಪೊಲೀಸರು. ಬೆಂಗಳೂರಿನ ಟ್ರಾಫಿಕ್ನಲ್ಲಿ ಸುಸ್ತಾಗುವ ವಾಹನ ಚಾಲಕರು ತಮ್ಮ ವಾಹನವನ್ನು ಟಾಪ್ ಗೇರ್ಗೆ ಹಾಕೋಕೆ ಆಗೋದಿಲ್ಲ. ಆದರೆ, ಎಕ್ಸ್ಪ್ರೆಸ್ ವೇಗೆ ಬಂದ ಕೂಡಲೇ ಟಾಪ್ ಗೇರ್ನಲ್ಲಿ ವಾಹನ ಚಲಾಯಿಸುತ್ತಾ ವಿಪರೀತ ವೇಗವಾಗಿ ಮುನ್ನುಗ್ಗುತ್ತಾರೆ.
ಆದ್ರೆ, ವಾಹನವನ್ನು ಸಡನ್ ಆಗಿ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾದಾಗ ಚಾಲಕರು ಗಾಬರಿಯಾಗುತ್ತಾರೆ. ಎದುರಿಗೆ ಅಥವಾ ಅಕ್ಕ ಪಕ್ಕ ಇರುವ ವಾಹನಗಳಿಗೆ ಢಿಕ್ಕಿ ಹೊಡೆಯುವ ಪ್ರಸಂಗ ಎದುರಾಗುತ್ತದೆ. ಕೆಲವು ವೇಳೆ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಎಕ್ಸ್ಪ್ರೆಸ್ ವೇನಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಅರಿವು ವಾಹನ ಚಾಲಕರಿಗೆ ಇರಬೇಕಿದೆ.
ಇನ್ನು ಹೆದ್ದಾರಿಯಲ್ಲಿ ಅಲ್ಲಲ್ಲಿ ಜನರ ಓಡಾಟಕ್ಕೆ ಅನುಕೂಲ ಆಗುವಂತೆ ಸ್ಕೈ ವಾಕ್ಗಳನ್ನು ನಿರ್ಮಿಸಬೇಕಿದೆ. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ರಸ್ತೆಯಲ್ಲಿ ಸಿಗ್ನಲ್ಗಳು ಇನ್ನಷ್ಟು ಸಮರ್ಪಕವಾಗಿ ಇರಬೇಕಿದೆ. ಮುಖ್ಯ ರಸ್ತೆಯಿಂದ ಸರ್ವೀಸ್ ರಸ್ತೆಗೆ ಸಾಗುವ ಮಾರ್ಗ ಇನ್ನಷ್ಟು ಸ್ಪಷ್ಟವಾಗಬೇಕಿದೆ. ಇನ್ನು ಫ್ಲೈ ಓವರ್ಗಳ ಕೆಳಗೆ ಬೀದಿ ದೀಪಗಳನ್ನೂ ಅಳವಡಿಸಬೇಕಿದೆ. ಇವೆಲ್ಲವೂ ಆದರೆ ತಕ್ಕಮಟ್ಟಿಗೆ ಅಪಘಾತ ತಡೆಯಬಹುದಾಗಿದೆ.
ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಕೂಡಲೇ ಆಗಬೇಕಾದ್ದು ಏನು?
- ಸುಗಮ ವಾಹನ ಸಂಚಾರಕ್ಕೆ ಇರುವ ಅಡತಡೆ ನಿವಾರಿಸಬೇಕು
- ವಾಹನಗಳ ವೇಗ ಗುರ್ತಿಸುವ ಕ್ಯಾಮರಾ ಅಳವಡಿಕೆ ಮಾಡಬೇಕು
- 100 ಕಿ. ಮೀ.ಗಿಂತಾ ಹೆಚ್ಚು ವೇಗದಲ್ಲಿ ಚಲಿಸುವ ವಾಹನಗಳನ್ನು ಗುರ್ತಿಸಿ ದಂಡ ಹಾಕಬೇಕು
- ಸಿಗ್ನಲ್ಗಳು ಹಾಗೂ ಸೂಚನಾ ಫಲಕಗಳ ಸಂಖ್ಯೆ ಹೆಚ್ಚಬೇಕು
- ಹೆದ್ದಾರಿಯಲ್ಲಿ ಎಲ್ಲಿಯೂ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
- ಸೂಕ್ತ ಸ್ಥಳಗಳಲ್ಲಿ ಸ್ಕೈ ವಾಕರ್ ಹಾಗೂ ಸಬ್ ವೇ ನಿರ್ಮಾಣ ಆಗಬೇಕು