ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಡಿಸಿಎಂ ಡಿಕೆಶಿವಕುಮಾರ್ ಮಾಲಾರ್ಪಣೆ ಮಾಡಿದ್ದಾರೆ. ಈ ವೇಳೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಸಚಿವ ಕೃಷ್ಣ ಭೈರೇಗೌಡ ಸಾಥ್ ನೀಡಿದರು.
ರಾಜ್ಯದ 31 ಜಿಲ್ಲೆಗಳಲ್ಲೂ ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ ಎಂದು ವಿಧಾನಸೌಧ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಂಪೇಗೌಡ ಜಯಂತಿ ಕುರಿತು ಮಾತನಾಡಿದ ಅವರು ‘ಈ ಹಿಂದೆ ನಮ್ಮ ಸರ್ಕಾರ ಕೆಂಪೇಗೌಡ ಜಯಂತಿ ಆರಂಭಿಸಿದ್ದು. ಸರ್ಕಾರದಿಂದ ಕೆಂಪೇಗೌಡ ಜಯಂತಿ ಆಚರಿಸಲು ಆದೇಶ ನೀಡಿದ್ದೆವು. ಕೆಂಪೇಗೌಡ ಪ್ರಾಧಿಕಾರವನ್ನು ರಚನೆ ಮಾಡಿದ್ದು ನಾವೇ ಎಂದರು.
ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ಕೆಂಪೇಗೌಡರ ಜಯಂತಿಯನ್ನು ಎಲ್ಲರ ಜಯಂತಿಯಾಗಿ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಶ್ರೀ ಹೇಳಿದರು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಸಿದ್ದರಾಮಯ್ಯ ಅವರು ಸಿಎಂ ಆಗಿ ಜಯಂತಿ ಮಾಡಿದ್ದರು. ಇಂದು ಈ ಕಾರ್ಯಕ್ರಮ ರಾಜ್ಯದ ಬೇರೆ ಕಡೆ ಕೂಡ ದೊಡ್ಡ ರೀತಿಯಲ್ಲಿ ಆಗುವಂತೆ ಮಾಡಿದ್ದು ಕೂಡ ಸಿದ್ದರಾಮಯ್ಯನವರೇ ಎಂದರು.