ಬೆಂಗಳೂರು: ಈ ವರ್ಷ ಮುಂಗಾರು ಮಳೆಯ ಕೊರತೆಯಿಂದ ಕರುನಾಡು ನಲುಗಿ ಹೋಗಿರುವುದು ಅಕ್ಷರಶಃ ಸತ್ಯ. ಈ ಸಂದರ್ಭದಲ್ಲಿ ಕೆಆರ್ಎಸ್, ಆಲಮಟ್ಟಿ ಸೇರಿ ರಾಜ್ಯದ ಪ್ರಮುಖ ಡ್ಯಾಂಗಳು ಬಹುತೇಕ ಡೆಡ್ ಸ್ಟೋರೇಜ್ ತಲುಪಿವೆ.
ಈಗಿನ ಪರಿಸ್ಥಿತಿ ನೋಡಿದರೆ, ಇನ್ನೂ ಕೆಲವು ದಿನದಲ್ಲಿ ಉತ್ತಮವಾಗಿ ಮಳೆ ಆಗದೇ ಇದ್ರೆ ರಾಜ್ಯದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕು ಅಂತಹ ಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರಿ ಪರದಾಟ ಎದುರಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ರೈತರು ಚಿಂತೆ ಮಾಡುವಂತಾಗಿದೆ. ಹಾಗೇ ಈ ಪರಿಸ್ಥಿತಿಯ ಪರಿಣಾಮ ಮತ್ತೊಮ್ಮೆ ಕಾವೇರಿ ನೀರಿಗೆ ಕಿತ್ತಾಟ ಶುರುವಾಗುವ ಆತಂಕ ಹೆಚ್ಚಾಗಿದೆ. ಇದು ಕೆಆರ್ಎಸ್ ಪರಿಸ್ಥಿತಿ ಮಾತ್ರವಲ್ಲ, ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ಇದೇ ಸ್ಥಿತಿ ಇದೆ.
ಹೌದು, ದಕ್ಷಿಣ ಕರ್ನಾಟಕದ ಸ್ಥಿತಿಯೇ ಉತ್ತರ ಕರ್ನಾಟಕಕ್ಕೂ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನರ ಜೀವನಾಡಿ ಆಲಮಟ್ಟಿ ಜಲಾಶಯದಲ್ಲಿ ನಿರು ನೆಲ ಮುಟ್ಟಿದೆ. ಈಗಾಗಲೇ ಲಕ್ಷಾಂತರ ಮೀನುಗಳು ನೀರಿಲ್ಲದೆ ಸತ್ತು ಬಿದ್ದಿವೆ. ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಆರಂಭಗೊಂಡಿದ್ದು 2002ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ 8 ಬಾರಿ ಡೆಡ್ ಸ್ಟೋರೇಜ್ಗಿಂತ ಕಡಿಮೆ ಮಟ್ಟಕ್ಕೆ ಜಲಾಶಯದ ನೀರು ಕುಸಿತ ಕಂಡಿದೆ. ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿ ಮಳೆಯಾಗಿ, ಪರಿಸ್ಥಿತಿ ಕೂಡ ಚೆನ್ನಾಗಿತ್ತು. ಆದ್ರೆ ಈಗ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ.
ಒಟ್ನಲ್ಲಿ ರಾಜ್ಯದ ಬಹುತೇಕ ಜಲಾಶಯಗಳ ಪರಿಸ್ಥಿತಿ ಭೀಕರವಾಗಿದೆ. ಮಳೆಯೇ ಇಲ್ಲದೆ ರಾಜ್ಯದ ರೈತರು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸುತ್ತಿದೆ. ಅಕಸ್ಮಾತ್ ಇನ್ನೂ ಕೆಲವು ವಾರಗಳ ಕಾಲ ಇದೇ ರೀತಿ ಮಳೆ ಬಾರದೆ ಇದ್ದು ಬರ ಎದುರಾದರೆ, ಅದನ್ನ ಎದುರಿಸಲು ಕೂಡ ಸಜ್ಜಾಗಬೇಕಿದೆ.