ಹಾಸನ: ಅನ್ನಭಾಗ್ಯ ಕಾರ್ಯಕ್ರಮಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. 2.29 ಲಕ್ಷ ಮೆ.ಟನ್ ಅಕ್ಕಿ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್.ಸಿ. ಐ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆಯುತ್ತಾರೆ. ಇದು ಕೇಂದ್ರ ಸರ್ಕಾರದ ಷಡ್ಯಂತ್ರ. ಅಕ್ಕಿಯ ದಾಸ್ತಾನು ಇದ್ದರೂ ಕೊಡುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ನವದೆಹಲಿಗೆ ಭೇಟಿ ನೀಡಿದಾಗ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ. ಬಡವರ ಮೇಲೆ ಗದಾ ಪ್ರಹಾರ ಮಾಡಲಾಗುತ್ತಿದೆ. ನಾವು ಘೋಷಣೆ ಮಾಡಿದಂತೆಯೇ ಅಕ್ಕಿ ಕೋರಿ ಪತ್ರ ಬರೆಯಲಾಗಿದೆ. ಅವರು ಒಪ್ಪಿ ಪತ್ರವನ್ನೂ ಬರೆದಿದ್ದಾರೆ. ನಾವು ಘೋಷಣೆ ಮಾಡುವ ಮುನ್ನ ಯಡಿಯೂರಪ್ಪ, ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತೇ ಎಂದು ಪ್ರಶ್ನಿಸಿದರು.
ಬಿಜೆಪಿ ಬಡವರ ವಿರೋಧಿ ಪಕ್ಷ. ಅಕ್ಕಿ ಪಡೆಯಲು ನಮ್ಮ ಪ್ರಯತ್ನ ಜಾರಿಯಲ್ಲಿದೆ. ನ್ಯಾಫೆಡ್, ಕೇಂದ್ರೀಯ ಭಂಡಾರ್, ಎನ್.ಸಿ.ಸಿಎಫ್ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ನಾಳೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಎಲ್ಲಿಯೂ ಅಗತ್ಯವಿರುಷ್ಟು ಅಕ್ಕಿ ದೊರೆಯುತ್ತಿಲ್ಲ. ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿಗೆ ತರಲಾಗುವುದು ಎಂದರು.