ಬೆಂಗಳೂರು: ಕಳೆದ ಬಾರಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಾಗ ಹಣ ಹೊಡೆಯುತ್ತಾರೆ ಎಂದು ಜೋರಾಗಿ ಪ್ರತಿಭಟನೆ ಮಾಡಿದರು. ಆಗ ಸಿದ್ದರಾಮಯ್ಯ ಹಾಗೂ ಜಾರ್ಜ್ ಯೋಜನೆ ಕೈ ಬಿಟ್ಟರು. ನಾನಾಗಿದ್ದರೆ ಯಾವುದಕ್ಕೂ ಬಗ್ಗುತ್ತಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಈಗಲೂ ನಾನು ಕೆಲವು ನಿರ್ಧಾರ ಕೈಗೊಳ್ಳುತ್ತೇನೆ. ಪ್ರತಿಭಟನೆ ಮಾಡುವವರು ಸಿದ್ಧರಾಗಲಿ. ನಾನು ಮಾತ್ರ ಕೆಲಸದ ವಿಚಾರದಲ್ಲಿ ಮುಂದೆ ಸಾಗುತ್ತಿರುತ್ತೇನೆ ಎಂದರು.
ಮಾನವನ ಗುಣಗಳಲ್ಲಿ ನಂಬಿಕೆ ಬಹಳ ಶ್ರೇಷ್ಠವಾದ ಗುಣ. ನೀವು ನಮ್ಮ ಮೇಲೆ ನಂಬಿಕೆ ಇಟ್ಟಿದ್ದೀರಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ನಾವು ಪ್ರತಿಮೆಗಿಂತ ಪ್ರಗತಿ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಈ ಹಿಂದಿನ ಸರ್ಕಾರಗಳು ಅನೇಕ ಕೆಲಸ ಮಾಡಿವೆ. ಅವರ ಆಚಾರ ವಿಚಾರಕ್ಕೆ ತಕ್ಕಂತೆ ಕೆಲಸ ಮಾಡಿವೆ ಎಂದರು.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸಬೇಕು. ಇದಕ್ಕಾಗಿ ಮೇಕೆದಾಟು ಯೋಜನೆ ಮುಂದಾಗಿದ್ದೇವೆ. ಇದರ ಜತೆಗೆ ಕಸದ ಸಮಸ್ಯೆ ನಿವಾರಣೆ ಮಾಡಬೇಕು. ಕೆಂಪೇಗೌಡರು ಹೇಗೆ ಎಲ್ಲಾ ಸಮಾಜದವರನ್ನು ಒಟ್ಟಾಗಿ ತೆಗೆದುಕೊಂಡು ಬೆಂಗಳೂರು ಕಟ್ಟಿದ್ದಾರೋ ಹಾಗೆಯೇ ಅವರ ಹಾದಿಯಲ್ಲಿ ನಾವು ಸಾಗಬೇಕು. ಬೆಂಗಳೂರು ಕಟ್ಟಬೇಕು ಎಂದರು.