ಬೆಂಗಳೂರು: ಎರಡನೇ ಬಾರಿಗೆ ಸಿಎಂ ಆಗಿದ್ದಕ್ಕೆ ಪತ್ರ ಬರೆದು ಅಭಿನಂದಿಸಿದ್ದ 8 ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಸಿದ್ದರಾಮಯ್ಯ ಮರಳಿ ಪತ್ರ ಬರೆದು ಉತ್ತರಿಸಿದ್ದಾರೆ. ಅನ್ನಭಾಗ್ಯ, ಶೂ ಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯದಂತ ಅನೇಕ ಕಾರ್ಯಕ್ರಮ ನೀಡಿದ್ದೀರಿ.
ನೀವು ಬಡವರು, ದೀನ ದಲಿತರ ಪರವಾಗಿರೋ ನಾಯಕ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದರು. ಇದಕ್ಕೆ ಸಿಎಂ ಕೊಪ್ಪಳ ವಿದ್ಯಾರ್ಥಿನಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಕೊಪ್ಪಳ ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್ನ 8ನೇ ತರಗತಿ ವಿದ್ಯಾರ್ಥಿನಿ ಶ್ರೆಯಾಂಕ ವಿ ಮೆಣಸಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆ ಇತ್ತೀಚೆಗೆ ಅಭಿನಂದನಾ ಪತ್ರ ಬರೆದಿದ್ದಳು.
ಪತ್ರದ ಮುಖೇನ ವಿದ್ಯಾರ್ಥಿನಿ ಸಿದ್ದರಾಮಯ್ಯ 2013ರ ಅವಧಿಯಲ್ಲಿ ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳಾದ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಪ್ರಸ್ತಾಪಿಸಿ, ಇದೇ ರೀತಿಯಾಗಿ ಈ ಬಾರಿಯೂ ಉತ್ತಮ ಆಡಳಿತ ನೀವು ನೀಡಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಳು.
ಸಾಮಾಜಿಕ ಕಳಕಳಿಯೊಂದಿಗೆ ಬರೆದಿರುವ ಈ ಪತ್ರವನ್ನು ಓದಿರುವ ಸಿದ್ದರಾಮಯ್ಯ, ಸಂತಸಗೊಂಡು ವಿದ್ಯಾರ್ಥಿನಿ ಶ್ರೇಯಾಂಕ ವಿ ಮೆಣಸಗಿಗೆ ಮರಳಿ ಪತ್ರ ಬರೆದಿದ್ದಾರೆ.