ವಾಷಿಂಗ್ಟನ್: ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಕರ್ತೆಯೊಬ್ಬರು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದ್ದು ಈ ಹಿನ್ನೆಲೆಯಲ್ಲಿ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ವೈಟ್ಹೌಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಬೆಳವಣಿಗೆಗಳು ‘ಸ್ವೀಕಾರಾರ್ಹವಲ್ಲ’ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಕರ್ತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಕಿರುಕುಳ ನೀಡುತ್ತಿರುವುದನ್ನು ಶ್ವೇತಭವನ ಬಲವಾಗಿ ಖಂಡಿಸುತ್ತದೆ. ಇದು ಪ್ರಜಾಪ್ರಭುತ್ವ ನೀತಿಗಳಿಗೆ ವಿರುದ್ಧವಾಗಿದೆ. ನಾವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದು, ಪತ್ರಕರ್ತರಿಗೆ ಕಿರುಕುಳ ನೀಡುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ “ಆ ಕಿರುಕುಳದ ವರದಿಗಳ ಬಗ್ಗೆ ನಮಗೆ ತಿಳಿದಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಕಿರ್ಬಿ ಹೇಳಿದ್ದಾರೆ.
ಯಾವುದೇ ಸಂದರ್ಭದಲ್ಲೂ ಪತ್ರಕರ್ತರಿಗೆ ಯಾವುದೇ ಕಿರುಕುಳ ಉಂಟಾದರು ನಾವು ಅದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ರಾಜ್ಯದಲ್ಲಿ ಕಳೆದ ವಾರ ಪ್ರದರ್ಶನಗೊಂಡ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಔತಣ ಕೂಟ ಏರ್ಪಡಿಸಿದ್ದರು. ಈ ವೇಳೆ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಧಾನಿ ಮೋದಿಯವರಿಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ್ತಿ ಸಬ್ರಿನಾ ಸಿದ್ದಿಕಿ ಪ್ರಶ್ನಿಸಿದ್ದರು. ಇದಕ್ಕೆ ಮೋದಿ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಬಲವಾಗಿವೆ. ಇದರಿಂದ ಜಾತಿ, ಧರ್ಮ, ವಯಸ್ಸು ಅಥವಾ ಯಾವುದೇ ರೀತಿಯ ಭೌಗೋಳಿಕ ಸ್ಥಳದ ಆಧಾರದಲ್ಲಿ ತಾರತಮ್ಯ ನಡೆಯುತ್ತಿಲ್ಲ. ನಮ್ಮ ರಕ್ತದಲ್ಲೇ ಪ್ರಜಾಪ್ರಭುತ್ವ ಸೇರಿಕೊಂಡಿದೆ ಎಂದಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ, ಪತ್ರಕರ್ತೆಯನ್ನು ಹಲವರು ನಿಂದಿಸಿದ್ದಾರೆ. ಅಲ್ಲದೇ ಮಾನಸಿಕವಾಗಿ ಹಿಂಸೆಯಾಗುವಂತಹ ಪದಗಳ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು