ಕಳೆದ ಕೆಲ ದಿನಗಳಿಂದ ಟಾಲಿವುಡ್ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣದ ಸದ್ದು ಕೇಳಿ ಬರುತ್ತಿದೆ. ಈಗಾಗಲೇ ಡ್ರಗ್ಸ್ ಪ್ರಕರಣ ಸಂಬಂಧ ಕಬಾಳಿ ಸಿನಿಮಾದ ನಿರ್ಮಾಪಕ ಕೆ.ಪಿ,ಚೌಧರಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಚೌಧರಿ ಸಂಪರ್ಕದಲ್ಲಿದ್ದ ಸಾಕಷ್ಟು ಮಂದಿಯ ಹೆಸರು ಹೊರ ಬಿದಿದ್ದು ಇದೀಗ ಇದೇ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಫೋನ್ ನಂಬರ್ ಲೀಕ್ ಆಗಿದೆ.
ನಟಿ ಅಶು ರೆಡ್ಡಿ ಚೌಧರಿ ಸಂಪರ್ಕದಲ್ಲಿರುವುದ ವಿಚಾರಣೆ ವೇಳೆ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಚೌಧರಿ ಜೊತೆ ಸಂಪರ್ಕದಲ್ಲಿರುವವರ ಫೋನ್ ನಂಬರ್ ಅನ್ನು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿ ಬಿಡುಗಡೆ ಮಾಡಿದ್ದು ಈ ವರದಿಯೇ ಅಶು ರೆಡ್ಡಿಗೆ ಮುಳುವಾಗಿದೆ.
ಅಶು ರೆಡ್ಡಿ ಫೋನ್ ನಂಬರ್ ಇರುವ ವರದಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದರಿಂದ ನಟಿಯ ನಂಬರ್ ಎಲ್ಲ ಕಡೆ ಹರಿದಾಡುತ್ತಿದೆ. ಜೊತೆಗೆ ಈ ವರದಿಯನ್ನು ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಅಶು ರೆಡ್ಡಿ ನಂಬರ್ ಬಹುತೇಕರಿಗೆ ಸಿಕ್ಕಿದೆ. ಹೀಗಾಗಿ ನಿತ್ಯ ಸಾವಿರಾರು ಕರೆಗಳು ಅಶು ರೆಡ್ಡಿಗೆ ಬರುತ್ತಿದ್ದು ಇದರಿಂದ ನಟಿಗೆ ಟೆನ್ಷನ್ ಶುರುವಾಗಿದೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅಶು ರೆಡ್ಡಿ, ಈ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಮತ್ತು ಫೋನ್ ನಂಬರ್ ಅನ್ನು ರಿಲೀಸ್ ಮಾಡಿದ್ದರಿಂದ ನನಗೆ ಸಾವಿರಾರು ಕರೆಗಳು ಬರುತ್ತಿದ್ದು ಇದರಿಂದ ನನಗೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ತಾವು ವಿದೇಶದಲ್ಲಿ ಇರುವುದಾಗಿಯೂ ತಿಳಿಸಿರುವ ಅವರು, ಬೇಕಾಬಿಟ್ಟಿ ತಮ್ಮ ಬಗ್ಗೆ ಸುದ್ದಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.