ಮುಂಬೈ: ಬೂಮ್ರಾ ಬಹಳ ಮುಖ್ಯ ಕ್ರಿಕೆಟಿಗ. ಆದ್ರೆ ವಿಶ್ವಕಪ್ನ ಹಿನ್ನೆಲೆಯಲ್ಲಿ ನೀವು ಆತುರಪಟ್ಟರೆ ನೀವು ಮತ್ತೆ 4 ತಿಂಗಳ ಕಾಲ ಅವರನ್ನ ಕಳೆದುಕೊಳ್ಳಬೇಕಾಗಬಹುದು. ಶಾಹಿನ್ ಅಫ್ರಿದಿ ಆದಂತೆಯೇ ಆಗಬಹುದು. ಇದು ಅತ್ಯಂತ ಸೂಕ್ಷ್ಮ ವಿಚಾರ ಎಂದು ಎಚ್ಚರಿಸಿದ್ದಾರೆ.
ಏಕದಿನ ವಿಶ್ವಕಪ್ಗೂ ಮುನ್ನ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲು ಸಿದ್ಧರಾಗಿರಬೇಕು ಎಂಬ ಕಾರಣಕ್ಕೆ, ಆತುರವಾಗಿ ಬುಮ್ರಾ ಅವರನ್ನ ಆಡಿಸುವ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಎಚ್ಚರಿಕೆ ಕೊಟ್ಟಿದ್ದಾರೆ.
ಈ ವರ್ಷಾಂತ್ಯಕ್ಕೆ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯಲಿದ್ದು, ಬುಮ್ರಾ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ತಯಾರಿ ನಡೆಸಿದೆ. ಬುಮ್ರಾ ಬಹುತೇಕ ಫಿಟ್ ಆಗಿದ್ದು, ವಿಶ್ವಕಪ್ಗೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ತಂಡಕ್ಕೆ ಕಂಬ್ಯಾಕ್ ಮಾಡಿಸುವ ಪ್ರಯತ್ನದಲ್ಲಿದೆ. ಈ ಬೆಳವಣಿಗೆಯ ಬಗ್ಗೆ ರವಿ ಶಾಸ್ತ್ರಿ ಟೀಂ ಇಂಡಿಯಾಗೆ (Team India) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರವಿ ಶಾಸ್ತ್ರಿ, ಏಕದಿನ ವಿಶ್ವಕಪ್ಗೂ ಮುನ್ನ ಬುಮ್ರಾ ಅವರನ್ನು ಆಡಿಸುವ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಟಿ20 ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಬುಮ್ರಾ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಓವರ್ಗಳಲ್ಲಿ 50 ರನ್ ಬಿಟ್ಟುಕೊಟ್ಟು ಟಿ20 ಕ್ರಿಕೆಟ್ನಲ್ಲಿ ಕೆಟ್ಟ ಸಾಧನೆ ಮಾಡಿದ್ದರು. ಯಾರ್ಕರ್ ಸ್ಪೆಷಲಿಸ್ಟ್ ಆಗಿರುವ ಬುಮ್ರಾ ಅಂದು ಯಾವುದೇ ವಿಕೆಟ್ ಸಹ ಪಡೆದಿರಲಿಲ್ಲ.