ಆಂಧ್ರಪ್ರದೇಶದಲ್ಲಿ ನಟ ಜೂನಿಯರ್ ಎನ್ ಟಿ ಆರ್ ಅಭಿಮಾನಿಯೋರ್ವನ ಸಾವು ಇದೀಗ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಜೂನ್ 26ರಂದು Jr NTR ಅಭಿಮಾನಿ ಪೂರ್ವ ಗೋಧಾವರಿ ಜಿಲ್ಲೆಯ ಶ್ಯಾಮ್ ನಿಧನಹೊಂದಿದ್ದಾನೆ. ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲವೆಂದು, ಶ್ಯಾಮ್ ಸಾವಿನ ಹಿಂದೆ ವೈಸಿಪಿ ಪಕ್ಷದ ಸ್ಥಳೀಯ ಮುಖಂಡನ ಕೈವಾಡವಿದೆಯೆಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಶ್ಯಾಮ್ ಸಾವು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಶ್ಯಾಮ್ ಸಾವಿನ ಕುರಿತು ಟ್ವೀಟ್ ಮಾಡಿರುವ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು” ಪಶ್ಚಿಮ ಗೋಧಾವರಿ ಜಿಲ್ಲೆಯ ಚಿಂತಲೂರಿನಲ್ಲಿ ಶ್ಯಾಮ್ ಅವರ ದುರಂತ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಸಾವಿನ ಸುತ್ತ ಎದ್ದಿರುವ ಅನುಮಾನಾಸ್ಪದ ಸನ್ನಿವೇಶಗಳು ಆತಂಕಕಾರಿಯಾಗಿದೆ. ಈ ವಿಷಯದ ಬಗ್ಗೆ ಕೂಲಂಕುಷ ತನಿಖೆ ನಡೆಸಿ, ನ್ಯಾಯ ಸಿಗುವಂತೆ ಮಾಡಬೇಕೆಂದು ನಾನು ಸರ್ಕಾರವನ್ನು ಬಲವಾಗಿ ಒತ್ತಾಯಿಸುತ್ತೇನೆ. ಶ್ಯಾಮ್ ಸಾವಿನ ಪ್ರಕರಣದಲ್ಲಿ ವೈಎಸ್ಆರ್ಸಿಪಿ ಸದಸ್ಯರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು” ಎಂದಿದ್ದಾರೆ.
ಚಂದ್ರಬಾಬು ನಾಯ್ಡು ಪುತ್ರ, ಟಿಡಿಪಿ ಮುಖಂಡ ನಾರಾ ಲೋಕೇಶ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ”ನಿರುದ್ಯೋಗಿ ಯುವಕ ಶ್ಯಾಮ್ನ ಅನುಮಾನಾಸ್ಪದ ಸಾವಿನ ಬಗ್ಗೆ ತಿಳಿದು ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪಗಳು. ಈ ಘಟನೆಯ ಹಿಂದೆ ವೈಸಿಪಿ ಮುಖಂಡರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಯಾವುದೇ ಪೂರ್ವಾಗ್ರಹ ಇಲ್ಲದೆ, ಪಾರದರ್ಶಕವಾಗಿ ಸಮಗ್ರ ತನಿಖೆಯ ಅಗತ್ಯವಿದೆ. ಶ್ಯಾಮ್ಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ” ಎಂದಿದ್ದಾರೆ.
ಆದರೆ ಆಡಳಿತಾರೂಢ ವೈಸಿಪಿ ಪಕ್ಷವು ಈ ಕುರಿತು ಟ್ವೀಟ್ ಮಾಡಿದ್ದು, ಶ್ಯಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಆದರೆ ವಿಪಕ್ಷದವರು ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ವೈಎಸ್ ಜಗನ್ ಅವರನ್ನು ನೇರವಾಗಿ ಎದುರಿಸಲಾಗದೆ ಜನರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥಹಾ ನೀಚ ನಾಯಕ ದೇಶದಲ್ಲೆ ಎಲ್ಲೂ ಇಲ್ಲ ಎಂದು ಚಂದ್ರಬಾಬು ನಾಯ್ಡು ಅವರನ್ನು ಟೀಕಿಸಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಸಾವಿಗೆ ಮುಂಚೆ ಶ್ಯಾಮ್ ಮಾಡಿದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದು, ಶ್ಯಾಮ್ ನಿಧನದ ಬಗ್ಗೆ ಸಂತಾಪಗಳಿವೆ. ಅವರ ಕುಟುಂಬಕ್ಕೆ ಜೂ ಎನ್ಟಿಆರ್ ಅಭಿಮಾನಿಗಳಿಗೆ ತಮ್ಮ ಸಂತಾಪಗಳು ಆದರೆ ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ ಎಂದಿದ್ದಾರೆ. ವಿಡಿಯೋಗಳಲ್ಲಿ ತಮ್ಮ ಅಪ್ಪ-ಅಮ್ಮನಿಗೆ ಹಾಗೂ ಗೆಳೆಯರಿಗೆ ಕ್ಷಮೆ ಕೇಳಿರುವ ಶ್ಯಾಮ್, ನನಗೆ ಕೆಲಸ ಮಾಡಲು ಇಷ್ಟವಿಲ್ಲ. ನನಗೆ ಉದ್ಯೋಗ ವ್ಯವಸ್ಥೆ ಬಗ್ಗೆಯೇ ಅಸಮಾಧಾನವಿದೆ” ಎಂದು ಹೇಳಿದ್ದಾರೆ.