ಗಂಗಾವತಿ: ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಗಳನ್ನ ಬಿಡುವಂತೆ ಎಬಿವಿಪಿಯಿಂದ ಗಂಗಾವತಿ ನಗರದ ಶ್ರೀ ಕೃಷ್ಣದೇವರಾಯ ಹತ್ತಿರದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಶಕ್ತಿ ಯೋಜನೆ ಜಾರಿ ಹಿನ್ನೆಲೆ ಬಸ್ ಗಳೆಲ್ಲಾ ಮಹಿಳಾ ಪ್ರಯಾಣಿಕರಿಂದ ತುಂಬುತ್ತಿವೆ. ಆದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದ್ರಿಂದ ತೊಂದರೆ ಆಗಿದ್ದು, ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ಗಳ ಬಾಗಿಲಿಗೆ ಜೋತುಬಿದ್ದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದ್ದು,
ಮಹಿಳೆಯರಿಗೆ ಉಚಿತ ಪ್ರಯಾಣದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಕಲ್ಪಿಸಬೇಕೆಂದು ಆಗ್ರಹಿಸಿ ಕೆಲಹೊತ್ತು ಬಸ್ ನಿಲ್ದಾಣದ ಪ್ರವೇಶ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ನಂತರ ಕಂಪ್ಲಿ, ಬೂದಗುಂಪ, ಆನೆಗುಂದಿ, ಕನಕಗಿರಿ ಭಾಗಕ್ಕೆ ತಲಾ 1ಬಸ್ ಹಾಗೂ ಕಾರಟಗಿ ಭಾಗಕ್ಕೆ ಹೆಚ್ಚುವರಿ ಬಸಗಳನ್ನು ಬಿಡುವಂತೆ ಎಬಿವಿಪಿ ಕಾರ್ಯಕರ್ತರು ಗಂಗಾವತಿ ತಹಸಿಲ್ದಾರ್ ಗೆ ಹಾಗೂ ಕೆಎಸ್ಆರ್ಟಿಸಿ ವಿಭಾಗದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.