ಬೆಂಗಳೂರು ;- ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್’ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ ದಕ್ಷ ಅಧಿಕಾರಿಗಳನ್ನು ಹುಡುಕಿ ಪೋಸ್ಟಿಂಗ್ ನೀಡುತ್ತಿದ್ದೇವೆ. ಯಾವುದೇ ಭ್ರಷ್ಟಾಚಾರ ಕೂಡ ನಡೆದಿಲ್ಲ ಎಂದಿದ್ದಾರೆ.
ನಾವು ಹಿಂದಿನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದೆವು. ನಾವು ಆರೋಪ ಮಾಡಿ, ನಾವೇ ಭ್ರಷ್ಟಾಚಾರ ಮಾಡಲು ಸಾಧ್ಯವಾ?, ಅದೆಲ್ಲಾ ಸುಳ್ಳು. ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಮಾತ್ರ ಮಣೆ ಹಾಕುತ್ತೇವೆ ಎಂದರು.
ಇನ್ನು ಈ ತಿಂಗಳ ವೇತನಕ್ಕೆ ಸಾರಿಗೆ ನಿಗಮದಲ್ಲಿ ಹಣ ಇಲ್ಲದಿರೋ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸರ್ಕಾರದಿಂದ ನಮಗೆ ಮಹಿಳಾ ಪ್ರಯಾಣಿಕರು ಎಷ್ಟು ಓಡಾಡಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಬೇಕು. ಅದರ ವೆಚ್ಚ ಮಾಹಿತಿ ನೀಡಲಿದ್ದೇವೆ. ಆ ಮೊತ್ತ ಸರ್ಕಾರ ಭರಿಸಲಿದೆ. ನಾಲ್ಕು ಸ್ವಾಮ್ಯದ ಸಂಸ್ಥೆಗಳಿಗೆ ವೇತನ ನೀಡಲಾಗುವುದು. ಊಹೆ ಮಾಡಿಕೊಂಡು ಹೇಳಿದ್ದಕ್ಕೆ ಉತ್ತರ ಕೊಡಲು ಆಗಲ್ಲ. ನಾವು ಸಂಬಳ ಕೊಡದೇ ಇದ್ದಾಗ ಕೊಡೊಲ್ಲ ಅಂತ ಹೇಳಿ, ನಾವು ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ತಿಳಿಸಿದರು.