ಬೆಂಗಳೂರು ;– ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಉಂಟಾಗಿರುವ ಹಿನ್ನೆಲೆ ಅಕ್ಕಿ ಬದಲು ಹಣ ಪಾವತಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಕೆ ಹೆಚ್ ಮುನಿಯಪ್ಪ, ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದೆ. ಎಫ್ಸಿಐನಲ್ಲಿ ಅಕ್ಕಿ ಸಂಗ್ರಹ ಹೆಚ್ಚಿದ್ದು, ಅಕ್ಕಿ ಕೊಡುವಂತೆ ಮನವಿ ಮಾಡಿದ್ದೆವು. ಆದರೆ ಅವರು ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದ್ದಾರೆ. ಇದರಲ್ಲಿ ರಾಜಕೀಯ ಮಾಡಲಾಗಿದೆ. ಅಕ್ಕಿ ಕೊಡುವುದಾಗಿ ನಾವು ರಾಜ್ಯದ ಜನರಿಗೆ ಮಾತು ಕೊಟ್ಟಿದ್ದೇವೆ. 1 ಕೆ.ಜಿಗೆ 34 ರೂ.ನಂತೆ ಬಿಪಿಎಲ್ ಕಾರ್ಡುದಾರರಿಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ನಮಗೆ ಸಹಕರಿಸದ ಕಾರಣ ನಾವು ಮಾತುಕೊಟ್ಟಂತೆ ಅಕ್ಕಿಯ ಬದಲು ಹಣ ಕೊಡುತ್ತೇವೆ. ಜುಲೈಯಿಂದ ಕೆ.ಜಿಗೆ 34 ರೂ.ನಂತೆ ಕುಟುಂಬದ ಸದಸ್ಯರಿಗೆ ಅಕ್ಕಿಯ ಹಣ ನೀಡಲಾಗುತ್ತದೆ. ಒಂದು ತಿಂಗಳಿಗೆ 750ರಿಂದ 800 ಕೋಟಿ ರೂ. ಹಣ ಬೇಕಾಗುತ್ತದೆ. ಅಕ್ಕಿ ವಿಚಾರವಾಗಿ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಅಂತಿಮವಾದ ಬಳಿಕ ಅಕ್ಕಿ ಕೊಡುತ್ತೇವೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಮನೆಯ ಯಜಮಾನನಿಗೆ ಹೆಸರಿನ ಖಾತೆಗೆ ಹಣ ನೀಡಲಾಗುತ್ತದೆ. ಐದು ಕೆಜಿಯಂತೆ ಒಬ್ಬ ವ್ಯಕ್ತಿಗೆ 170 ರೂ. ಹಣ ಪಾವತಿ ಮಾಡಲಾಗುತ್ತದೆ. ಒಟ್ಟು 85 ಲಕ್ಷ ಬಿಪಿಎಲ್ ಕಾರ್ಡುಗಳಿವೆ. ಟೆಂಡರ್ ಮೂಲಕ ಬೇಕಾದಷ್ಟು ಅಕ್ಕಿ ಸಂಗ್ರಹವಾದರೆ ಆದಷ್ಟು ಬೇಗ ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ..